
ಮಯೂರ್ ಪಟೇಲ್
ಬೆಂಗಳೂರು: ಮದ್ಯ ಸೇವಿಸಿ ಕಾರು ಚಾಲನೆ ಮಾಡಿ ಸರಣಿ ಅಪಘಾತ ನಡೆಸಿದ ನಟ ಮಯೂರ್ ಪಟೇಲ್ ಅವರ ವಿರುದ್ಧ ಹಲಸೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಗುರುವಾರ ಎಫ್‌ಐಆರ್ ದಾಖಲಾಗಿದೆ.
ಬುಧವಾರ ರಾತ್ರಿ 10 ಗಂಟೆಯ ಸುಮಾರಿಗೆ ಕಮಾಂಡೊ ಆಸ್ಪತ್ರೆ ಬಳಿಯ ಸಿಗ್ನಲ್‌ನಲ್ಲಿ ಅಪಘಾತ ನಡೆದಿದೆ. ಮಯೂರ್ ಪಟೇಲ್ ಅವರ ಕಾರನ್ನು ಜಪ್ತಿ ಮಾಡಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.
ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿಕೊಂಡು ಬಂದು ರಸ್ತೆಯ ಸಿಗ್ನಲ್‌ನಲ್ಲಿ ನಿಂತಿದ್ದ ಕಾರುಗಳಿಗೆ ಮಯೂರ್ ಪಟೇಲ್ ಅವರಿದ್ದ ಫಾರ್ಚ್ಯೂನರ್ ಕಾರು ಡಿಕ್ಕಿಯಾಗಿತ್ತು. ಈ ವೇಳೆ ಕಾರುಗಳ ನಡುವೆ ಸರಣಿ ಅಪಘಾತವಾಗಿದೆ. ಅಭಿಷೇಕ್, ಶ್ರೀನಿವಾಸ್ ಅವರಿಗೆ ಸೇರಿದ ಎರಡು ಕಾರು ಹಾಗೂ ಮತ್ತೊಂದು ಸರ್ಕಾರಿ ಕಾರಿಗೆ ಹಾನಿಯಾಗಿದೆ ಎಂದು ಪೊಲೀಸರು ಹೇಳಿದರು.
ಮಯೂರ್ ಪಟೇಲ್ ತಾವೇ ಕಾರು ಚಲಾಯಿಸುತ್ತಿದ್ದರು. ಅತಿವೇಗದ ಚಾಲನೆಯಿಂದ ಅಪಘಾತ ಎಸಗಿದ್ದಾರೆ. ಮದ್ಯ ಸೇವಿಸಿರುವುದು ತಪಾಸಣೆ ವೇಳೆ ದೃಢಪಟ್ಟಿದೆ. ಅಲ್ಲದೇ ಕಾರಿನ ವಿಮೆ ಅವಧಿ ಸಹ ಮುಕ್ತಾಯ ಆಗಿರುವುದು ಕಂಡುಬಂದಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಘಟನೆಯ ಸಂಬಂಧ ಕಾರು ಚಾಲಕ ಶ್ರೀನಿವಾಸ್ ಅವರು ದೂರು ನೀಡಿದ್ಧಾರೆ. ಹಲಸೂರು ಸಂಚಾರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಪಘಾತದ ನಂತರ ಕಾರಿನಿಂದ ಕೆಳಗಿಳಿದ ಮಯೂರ್ ಪಟೇಲ್ ಅವರು ‘ಏನೇ ಇದ್ದರೂ ನಾನು ಸೆಟ್ಲ್ ಮಾಡಿಕೊಡುತ್ತೇನೆ. ಬೆಳಿಗ್ಗೆ ಎಲ್ಲವೂ ಸರಿ ಮಾಡುತ್ತೇನೆ’ ಎಂದು ಹೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ ದಾಖಲಾಗಿದೆ.
‘ಕಾರು ಖರೀದಿಸಿ ಒಂದು ವಾರವಷ್ಟೇ ಆಗಿತ್ತು. ಪತ್ನಿಯ ಚಿನ್ನಾಭರಣ ಅಡವಿಟ್ಟು ಕಾರು ಖರೀದಿಸಿದ್ದೆ. ಕಂಪನಿ ಉದ್ಯೋಗಿಗಳನ್ನು ಪಿಕ್‌ಅಪ್ ಹಾಗೂ ಡ್ರಾಪ್ ಮಾಡುವ ಕೆಲಸ ಮಾಡುತ್ತಿದ್ದೇನೆ. ಪ್ರತಿ ತಿಂಗಳ ಐದರಂದು ಇಎಂಐ ಪಾವತಿಸಬೇಕು. ಸರಣಿ ಅಪಘಾತದ ವೇಳೆ ನನ್ನ ಕಾರು ಜಖಂಗೊಂಡಿದೆ. ಮಯೂರ್ ಅವರ ಕಾರಿನ ವಿಮೆ ಅವಧಿ ಮುಕ್ತಾಯವಾಗಿದೆ. ಈಗ ಏನು ಮಾಡುವುದು’ ಎಂದು ಶ್ರೀನಿವಾಸ್ ಅವರು ಅಳಲು ತೋಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.