ADVERTISEMENT

ಸಂಘ–ಸಂಸ್ಥೆಗಳಿಗೆ ಅನುದಾನ

ನೀತಿ ಸಂಹಿತೆಯಿಂದ ತಡೆಹಿಡಿಯಲಾಗಿದ್ದ ಪ್ರಕ್ರಿಯೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2019, 19:19 IST
Last Updated 24 ಜುಲೈ 2019, 19:19 IST

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2018–19ನೇ ಸಾಲಿನಲ್ಲಿ ಧನಸಹಾಯಕ್ಕೆ ಆಯ್ಕೆಯಾಗಿದ್ದ ಸಾಂಸ್ಕೃತಿಕ ಸಂಘ–ಸಂಸ್ಥೆಗಳಿಗೆ ಸಹಾಯಧನವನ್ನು ಬಿಡುಗಡೆ ಮಾಡಿದೆ.

ಕಳೆದ ವರ್ಷಧನಸಹಾಯ ಪ್ರಕ್ರಿಯೆ ಅಂತಿಮಗೊಳ್ಳುವ ಹೊತ್ತಿನಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾಗಿತ್ತು. ಇದರಿಂದಾಗಿ ಧನಸಹಾಯ ಪ್ರಕ್ರಿಯೆಯನ್ನು ಸ್ಥಗಿತ ಮಾಡಿ, ಯೋಜನೆಯ ಅನುದಾನವನ್ನು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದಡಿ ಪ್ರತ್ಯೇಕವಾಗಿ ಇರಿಸಲಾಗಿತ್ತು. ಇದೀಗ ವಿವಿಧ ಸಂಘ–ಸಂಸ್ಥೆಗಳಿಗೆ, ವಾದ್ಯ ಪರಿಕರ ಖರೀದಿಗೆ ಹಾಗೂ ಚಿತ್ರಕಲೆಗೆ ಒಟ್ಟು ₹11.60 ಕೋಟಿಯನ್ನು ಇಲಾಖೆ ಹಂಚಿದೆ.

ಶ್ರೀರಾಮ ಕಲಾ ವೇದಿಕೆ, ನಾಟ್ಯಾಂಜಲಿ ಟ್ರಸ್ಟ್, ದಾಸ ಸಾಹಿತ್ಯ ಪರಿಷತ್ತು, ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರ ಸೇರಿದಂತೆರಾಜ್ಯದ ವಿವಿಧ ಜಿಲ್ಲೆಯಲ್ಲಿನ 593 ಸಂಘ–ಸಂಸ್ಥೆಗಳು ಅನುದಾನವನ್ನು ಪಡೆದುಕೊಂಡಿವೆ. ಚಿತ್ರಕಲೆ ಮತ್ತು ಶಿಲ್ಪಕಲೆ ಪ್ರದರ್ಶನಕ್ಕೆ 193 ಮಂದಿ ಕಲಾವಿದರಿಗೆ ಅನುದಾನ ಹಂಚಿಕೆ ಮಾಡಲಾಗಿದೆ. ಅದೇ ರೀತಿ, ವಾದ್ಯಪರಿಕರ ಹಾಗೂ ವೇಷಭೂಷಣ ವಿಭಾಗದಲ್ಲಿ ಅನುದಾನ ಪಡೆದುಕೊಳ್ಳುವಲ್ಲಿ 363 ಮಂದಿ ಯಶಸ್ವಿಯಾಗಿದ್ದಾರೆ.

ADVERTISEMENT

ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್, ಬೆಂಗಳೂರು ನಗರದ ರಂಗನಿರಂತರ ಸಾಂಸ್ಕೃತಿಕ ಸಂಘ, ‌ಇಂದಿರಾ
ನಗರದ ಸಂಗೀತ ಸಭಾ (ತಲಾ ₹15 ಲಕ್ಷ) ಅತಿ ಹೆಚ್ಚು ಅನುದಾನ ಪಡೆದಿವೆ. ಸಹಾಯಧನದ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಕೆಲ ಸಂಘ– ಸಂಸ್ಥೆಗಳ ಮುಖ್ಯಸ್ಥರುನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಬಿಡುಗಡೆಯಾಗಿಲ್ಲ ಎಂದು ಇಲಾಖೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

‘ಆಯ್ಕೆ ಸಲಹಾ ಸಮಿತಿಯು ಪರಿಶೀಲಿಸಿ, ಸೂಚಿಸಿದ ಕೆಲ ಸಂಘ–ಸಂಸ್ಥೆಯನ್ನು ಸರ್ಕಾರ ಕೈಬಿಟ್ಟಿದೆ. ಅನುದಾನದ ಮೊತ್ತವನ್ನೂ ಕಡಿತ ಮಾಡಿರುವುದು ಬೇಸರವನ್ನುಂಟು ಮಾಡಿದೆ. ಮೈಸೂರಿನ ನಟನಾ ಸೇರಿದಂತೆ ವಿವಿಧ ಕ್ರಿಯಾಶೀಲ ರಂಗತಂಡಗಳಿಗೆ ಅನುದಾನವನ್ನು ನಿರಾಕರಿಸಲಾಗಿದೆ. ಸಾಣೆಹಳ್ಳಿ ರಂಗಶಿಕ್ಷಣ ಕೇಂದ್ರಕ್ಕೆ ಪ್ರತಿ ವರ್ಷ ₹50 ಲಕ್ಷ ಹಣ ಬಿಡುಗಡೆ ಮಾಡಲಾಗುತ್ತಿತ್ತು. ಈ ವರ್ಷ ಕೇವಲ ₹10ಲಕ್ಷ ಬಿಡುಗಡೆ ಮಾಡಲಾಗಿದೆ’ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ, ಧನಸಹಾಯ ಆಯ್ಕೆ ಸಮಿತಿ ಸದಸ್ಯ ಜೆ. ಲೋಕೇಶ್ ಬೇಸರ ವ್ಯಕ್ತಪಡಿಸಿದರು.

‘ಅಧಿಕಾರಿಗಳು ತಮ್ಮಿಚ್ಛೆಯಂತೆ ಅನುದಾನವನ್ನು ಮಂಜೂರು ಮಾಡುವುದಿದ್ದರೆ ಆಯ್ಕೆ ಸಮಿತಿಯ ಅಗತ್ಯ ಇರಲಿಲ್ಲ. ಕೆಲ ಸಂಘ–ಸಂಸ್ಥೆಗಳಿಗೆ ಅನ್ಯಾಯವಾಗಿದ್ದು, ನಾನು ಅಸಹಾಯಕನಾಗಿರುವೆ’ ಎಂದರು.

‘ಅಗತ್ಯ ದಾಖಲಾತಿಯನ್ನು ನೀಡದ ಕೆಲ ಸಂಘ– ಸಂಸ್ಥೆಗಳನ್ನು ಕೈಬಿಡಲಾಗಿದೆ. ಪ್ರಾಮಾಣಿಕವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದವರಿಗೆ ಅನುದಾನ ಹಂಚಿಕೆ ಮಾಡಲಾಗಿದೆ. ಕನಿಷ್ಠ ₹50 ಸಾವಿರದಿಂದ ಗರಿಷ್ಠ ₹15 ಲಕ್ಷದವರೆಗೆ ಅನುದಾನ ನೀಡಲಾಗಿದೆ’ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2019-2020ನೇ ಸಾಲಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ ಹೊಸ ನೀತಿ ಜಾರಿಗೆ ತರುವ ಉದ್ದೇಶವಿದೆ. ಇದರಿಂದ ಧನಸಹಾಯಕ್ಕೆ ಆನ್‍ಲೈನ್ ಮೂಲಕ ಅರ್ಜಿಗಳನ್ನು ಕರೆಯುವ ಪ್ರಕ್ರಿಯೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.