ADVERTISEMENT

ಹಿಂದಿ ಬಲ್ಲವರಿಗಷ್ಟೇ ಉದ್ಯೋಗ!

ಕಂಪನಿಗಳ ಧೋರಣೆಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2019, 19:57 IST
Last Updated 4 ಆಗಸ್ಟ್ 2019, 19:57 IST
ಇಂಗ್ಲಿಷ್‌–ಹಿಂದಿ ತಿಳಿದಿರಬೇಕು ಎಂಬ ಪ್ರಕಟಣೆ ಇರುವುದು
ಇಂಗ್ಲಿಷ್‌–ಹಿಂದಿ ತಿಳಿದಿರಬೇಕು ಎಂಬ ಪ್ರಕಟಣೆ ಇರುವುದು   

ಬೆಂಗಳೂರು: ಇಂಗ್ಲಿಷ್‌–ಹಿಂದಿ ತಿಳಿದಿರುವುದು ಹಾಗೂ ಮಾತನಾಡುವುದು ಕಡ್ಡಾಯ, ದಕ್ಷಿಣದ ಅಭ್ಯರ್ಥಿಗಳನ್ನು ಪರಿಗಣಿಸದಿರುವುದು ಸೂಕ್ತ !

ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳು ಫೇಸ್‌ಬುಕ್‌ನಲ್ಲಿ ಬಹಿರಂಗವಾಗಿ ನೀಡುತ್ತಿರುವ ಪ್ರಕಟಣೆಗಳಿವು. ಈ ಪ್ರಕಟಣೆ ಹೊಂದಿರುವ ‘ಸ್ಕ್ರೀನ್‌ಶಾಟ್‌’ ಗಳು ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ‘ಕನ್ನಡ’ ಮಾತ್ರ ತಿಳಿದಿರುವ ಅಭ್ಯರ್ಥಿಗಳಿಗೆ ಇಂತಹ ಕಂಪನಿಗಳ ಉದ್ಯೋಗಾವಕಾಶಗಳಲ್ಲಿ ಅವಕಾಶವೇ ಇಲ್ಲ. ಅದಕ್ಕೂ ಮುಖ್ಯವಾಗಿ ‘ದಕ್ಷಿಣದ ಅಭ್ಯರ್ಥಿಗಳನ್ನು ಕಡೆಗಣಿಸುವುದು ಉತ್ತಮ’ ಎಂಬರ್ಥದ ಸೂಚನೆಗಳು ಇಲ್ಲಿವೆ.

ಫೇಸ್‌ಬುಕ್‌ನಲ್ಲಿ ಬೆಂಗಳೂರು ಫ್ರೆಷರ್‌ ಜಾಬ್‌ ಸೀಕರ್‌ (Bangalore Fresher Job Seeker) ಗ್ರೂಪ್‌ನಲ್ಲಿ ವಿವಿಧ ಬಹುರಾಷ್ಟ್ರೀಯ ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳು ಇಂತಹ ಪ್ರಕಟಣೆ ನೀಡಿದ್ದಾರೆ.

ADVERTISEMENT

ಈ ಬಗ್ಗೆ ಕನ್ನಡಪರ ಸಂಘಟನೆಗಳು, ಸಾಹಿತಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನಾವು ಯಾವ ವ್ಯವಸ್ಥೆಯಲ್ಲಿದ್ದೇವೆ. ಭಾಷಾವಾರು ರಚನೆಯಾದ ರಾಜ್ಯದ ಉದ್ದೇಶವೇನು ಎಂಬ ಪ್ರಶ್ನೆಗಳನ್ನು ನಾವೇ ಕೇಳಿಕೊಳ್ಳಬೇಕಾಗಿದೆ. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತರ ಭಾರತದ ಖಾಸಗಿ ಕಂಪನಿಗಳು ಭಾಷೆಯ ವಿಷಯದಲ್ಲಿ ಎಷ್ಟು ದಾರ್ಷ್ಟ್ಯದಿಂದ ವರ್ತಿಸುತ್ತಿವೆ ಎಂಬುದಕ್ಕೆ ಇದು ಸಾಕ್ಷಿ’ ಎಂದು ಸಾಹಿತಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕನ್ನಡವನ್ನು ಬಹಿರಂಗವಾಗಿ ನಿರ್ಲಕ್ಷಿಸುವಷ್ಟು ಧೈರ್ಯವನ್ನು ಬಹುರಾಷ್ಟ್ರೀಯ ಕಂಪನಿಗಳ ಅಧಿಕಾರಿಗಳು ಪ್ರದರ್ಶಿಸುತ್ತಿದ್ದಾರೆ. ನಾವು ಇಂತಹ ವರ್ತನೆಗಳನ್ನು ಪ್ರಶ್ನಿಸದೇ ಇರುವುದು ಮತ್ತು ಖಂಡಿಸದೇ ಇರುವುದರಿಂದಲೇ ಖಾಸಗಿ ಕಂಪನಿಗಳು ಇಂತಹ ಕನ್ನಡ ವಿರೋಧಿ ನಿಲುವುಗಳನ್ನು ತಾಳಿವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.