ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಶಸ್ತಿ ಪುರಸ್ಕೃತರೊಂದಿಗೆ ಶಿವರಾಜ್ ತಂಗಡಗಿ, ಬಾನು ಮುಷ್ತಾಕ್, ದೀಪಾ ಭಾಸ್ತಿ, ಮಾನಸ, ಚನ್ನಪ್ಪ ಕಟ್ಟಿ, ಪುರುಷೋತ್ತಮ ಬಿಳಿಮಲೆ, ಅರವಿಂದ ಮಾಲಗತ್ತಿ, ಕೆ.ಎಂ. ಗಾಯತ್ರಿ, ಕಿರಣ್ ಸಿಂಗ್ ಉಪಸ್ಥಿತರಿದ್ದರು
–ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಏಕಗವಾಕ್ಷಿ ಯೋಜನೆಯಡಿ ಪುಸ್ತಕ ಖರೀದಿಗೆ ಇರುವ ಕಾನೂನು ತೊಡಕುಗಳನ್ನು ನಿವಾರಣೆ ಮಾಡಬೇಕಿದೆ. ಈ ಸಂಬಂಧ ಸಾಹಿತಿಗಳನ್ನೊಳಗೊಂಡ ನಿಯೋಗವನ್ನು ಮುಖ್ಯಮಂತ್ರಿ ಬಳಿ ಕರೆದೊಯ್ಯಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಭರವಸೆ ನೀಡಿದರು.
ಕನ್ನಡ ಪುಸ್ತಕ ಪ್ರಾಧಿಕಾರ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಾಧಿಕಾರದ ನಾಲ್ಕು ವರ್ಷಗಳ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದರು. ಇದೇ ವೇಳೆ ‘ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ’ ವಿಜೇತ ಲೇಖಕಿ ಬಾನು ಮುಷ್ತಾಕ್ ಹಾಗೂ ಅನುವಾದಕಿ ದೀಪಾ ಭಾಸ್ತಿ ಅವರನ್ನು ಅಭಿನಂದಿಸಿ, ರಾಜ್ಯ ಸರ್ಕಾರದ ವತಿಯಿಂದ ಘೋಷಿಸಲಾಗಿದ್ದ ತಲಾ ₹ 10 ಲಕ್ಷದ ಚೆಕ್ ವಿತರಿಸಲಾಯಿತು.
ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್, ‘ಪ್ರಭುತ್ವವು ಜನಪರ ಮತ್ತು ಜೀವಪರ ಆಗಿದ್ದಾಗಲೆ ಕಲೆ, ಸಾಹಿತ್ಯ, ಸಂಸ್ಕೃತಿಯ ಪೋಷಣೆ ಸಾಧ್ಯವಾಗಲಿದೆ. ಯಾವ ಪ್ರಭುತ್ವ ಜನವಿರೋಧಿ ಆಗಿರುತ್ತದೆಯೊ, ಯಾವ ಪ್ರಭುತ್ವವು ಜನರಿಗೆ ಸಾಹಿತ್ಯದ ಮೂಲಕ ರಾಜಕೀಯ, ಐತಿಹಾಸಿಕ ಮತ್ತು ಸಾಮಾಜಿಕ ಒಳನೋಟ ಸಿಗಬಾರದೆಂದು ತೀರ್ಮಾನ ಮಾಡುತ್ತದೆಯೋ ಅಂತಹ ಪ್ರಭುತ್ವ ಸಾಹಿತ್ಯ, ಕಲೆಯನ್ನು ಹತ್ತಿಕ್ಕುತ್ತದೆ. ಸಾಹಿತಿಗಳನ್ನು ಜೈಲಿಗೆ ಅಟ್ಟುತ್ತದೆ’ ಎಂದು ಅಭಿಪ್ರಾಯಪಟ್ಟರು. ಸಾಹಿತಿ ಅರವಿಂದ ಮಾಲಗತ್ತಿ ಅವರು ಅಭಿನಂದನಾ ನುಡಿಗಳನ್ನಾಡಿದರು.
ನಾಲ್ಕು ವರ್ಷಗಳ ಪ್ರಶಸ್ತಿ ಪುರಸ್ಕೃತರು
ಸಮಾರಂಭದಲ್ಲಿ ಪ್ರಾಧಿಕಾರದ ವತಿಯಿಂದ 2021, 2022, 2023 ಮತ್ತು 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯದ ಪರವಾಗಿ ದಿನೇಶ್ ಹೆಗ್ಡೆ, ಗದಗದ ಲಡಾಯಿ ಪ್ರಕಾಶನದ ಪರವಾಗಿ ಬಸವರಾಜ ಸೂಳಿಭಾವಿ, ಮೈಸೂರಿನ ಅಭಿರುಚಿ ಪ್ರಕಾಶನ ಪರವಾಗಿ ಎ. ಗಣೇಶ ಹಾಗೂ ಕಲಬುರಗಿಯ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ಪರವಾಗಿ ಅಪ್ಪಾರಾವ ಅಕ್ಕೋಣೆ ಅವರಿಗೆ ‘ಅತ್ಯುತ್ತಮ ಪ್ರಕಾಶನ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯು ತಲಾ ₹ 1 ಲಕ್ಷ ನಗದು ಹೊಂದಿದೆ.
ಧಾರವಾಡದ ಗುರುಲಿಂಗ ಕಾಪಸೆ ಅವರ ಪರವಾಗಿ ಅವರ ಪುತ್ರ ಚಂದ್ರಶೇಖರ್, ಮೈಸೂರಿನ ಪ್ರೊ.ಪಿ.ವಿ. ನಂಜರಾಜ ಅರಸ್, ಮಂಗಳೂರಿನ ಇಂದಿರಾ ಹೆಗ್ಗಡೆ ಹಾಗೂ ವಿಜಯನಗರದ ಹೊಸಪೇಟೆಯ ಕೆ. ರವೀಂದ್ರನಾಥ್ ಅವರಿಗೆ ‘ಡಾ.ಎಂ.ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯು ತಲಾ ₹ 75 ಸಾವಿರ ನಗದು ಒಳಗೊಂಡಿದೆ.
‘ಡಾ.ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ’ಯನ್ನು ಮೂಡಬಿದರೆಯ ಎಂ. ಮೋಹನ ಆಳ್ವ, ಮಂಡ್ಯದ ಪ್ರೊ.ಬಿ.ಜಯಪ್ರಕಾಶಗೌಡ, ಬಳ್ಳಾರಿಯ ಹಗರಿಬೊಮ್ಮನಹಳ್ಳಿಯ ಮೇಟಿಕೊಟ್ರಪ್ಪ, ಮೈಸೂರಿನ ರಂಗನಾಥ ಅವರಿಗೆ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯು ತಲಾ ₹ 50 ಸಾವಿರ ನಗದು ಒಳಗೊಂಡಿದೆ.
ಬೆಂಗಳೂರಿನ ನಾ. ಸೋಮೇಶ್ವರ, ಮೈಸೂರಿನ ಶ್ರೀಮತಿ ಹರಿಪ್ರಸಾದ್, ಯಾದಗಿರಿಯ ಎಸ್.ಎಸ್. ಗುಬ್ಬಿ ಮತ್ತು ಬಾಗಲಕೋಟೆಯ ಕರವೀರಪ್ರಭು ಕ್ಯಾಲಕೊಂಡ ಅವರಿಗೆ ‘ಡಾ. ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ’ ವಿತರಿಸಲಾಯಿತು. ಈ ಪ್ರಶಸ್ತಿಯು ತಲಾ ₹ 25 ಸಾವಿರ ನಗದು ಹೊಂದಿದೆ. ಇದೇ ವೇಳೆ ‘ಪುಸ್ತಕ ಸೊಗಸು’ ಹಾಗೂ ‘ಮುದ್ರಣ ಸೊಗಸು’ ಬಹುಮಾನ ವಿತರಿಸಲಾಯಿತು.
ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿಯ ಸಂಭ್ರಮ ಇಲ್ಲಿಗೆ ನಿಲ್ಲಬಾರದು. ನಮ್ಮಲ್ಲಿ ಸಾಕಷ್ಟು ಅದ್ಭುತ ಕೃತಿಗಳಿದ್ದು ಅವು ಬೇರೆ ಭಾಷೆಗೆ ಅನುವಾದವಾಗಬೇಕು-ದೀಪಾ ಭಾಸ್ತಿ, ಅನುವಾದಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.