ಬೆಂಗಳೂರು: ಉತ್ತಮ ಪುಸ್ತಕಗಳನ್ನು ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಹಾಗಾಗಿ ಪೋಷಕರು ಮಕ್ಕಳಿಗೆ ಪುಸ್ತಕಗಳನ್ನು ಓದುವ ಸಂಸ್ಕಾರ ಕಲಿಸಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.
ರಾಷ್ಟ್ರೋತ್ಥಾನ ಸಾಹಿತ್ಯ ಪರಿಷತ್ ಶನಿವಾರ ಆಯೋಜಿಸಿದ್ದ ಕನ್ನಡ ಪುಸ್ತಕ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಸಾಹಿತ್ಯದ ಹೆಸರಿನಲ್ಲಿ ಬರೆದಿರುವ ಎಲ್ಲ ಪುಸ್ತಕಗಳನ್ನು ಓದುತ್ತಾ ಹೋದರೆ ನಮ್ಮ ಪ್ರಜ್ಞೆ ಕುಸಿಯುತ್ತದೆ. ಕೆಲವು ಪುಸ್ತಕಗಳನ್ನು ಕೈ ತೊಳೆದುಕೊಂಡು ಓದಬೇಕು. ಇನ್ನು ಕೆಲವು ಪುಸ್ತಕಗಳನ್ನು ಓದಿದ ಬಳಿಕ ಕೈ ಮತ್ತು ಮನಸ್ಸು ತೊಳೆದುಕೊಳ್ಳಬೇಕು. ಒಳ್ಳೆಯ ಸಾಹಿತಿಗಳು ಬರೆದಿರುವ ಪುಸ್ತಕ ಓದಿದರೆ ಮನಸ್ಸು ಮತ್ತು ಬುದ್ದಿ ಬೆಳೆಯುತ್ತದೆ’ ಎಂದು ಹೇಳಿದರು.
‘ಮಾತೃಭಾಷೆಯ ಸಾಹಿತ್ಯ ಓದಿದರೆ ವ್ಯಕ್ತಿಯ ಮನಸ್ಸು ಮತ್ತು ಬುದ್ಧಿ ವಿಕಸನವಾಗುತ್ತದೆ. ಜಗತ್ತಿನ ಇತಿಹಾಸ ಬದಲಿಸಿದ ವ್ಯಕ್ತಿಗಳ ಜೀವನ ಚರಿತ್ರೆ ಓದಿದರೆ ಪುಸ್ತಕಗಳ ಮಹತ್ವ ಏನು ಎಂಬುದು ಗೊತ್ತಾಗುತ್ತದೆ’ ಎಂದರು.
‘ನಾಲ್ಕನೇ ಕೈಗಾರಿಕಾ ಕ್ರಾಂತಿಗೆ ಕೃತಕ ಬುದ್ಧಿಮತ್ತೆ (ಎಐ) ಕಾರಣವಾಗಬಹುದು. ರೊಬೊಟ್ ಹೇಳುವ ಭಾಷೆ ಕೇಳಿದರೆ ಭಯವಾಗುತ್ತದೆ. ಕೃತಕ ಬುದ್ದಿಮತ್ತೆ ಮೇಲೆ ಸಂಪೂರ್ಣ ಅವಲಂಬಿತರಾದರೆ ಸೃಜನಶೀಲತೆ ಹಾಳಾಗಿ ಅಸ್ತಿತ್ವವೇ ಇರುವುದಿಲ್ಲ’ ಎಂದು ಎಚ್ಚರಿಸಿದರು.
ಸಾಹಿತಿ ಚಂದ್ರಶೇಖರ ಕಂಬಾರ ಮಾತನಾಡಿ, ‘ದೇಶ, ವಿದೇಶಗಳಲ್ಲಿ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇನೆ. ಸಭೆ, ಸಮಾರಂಭ ಹಾಗೂ ಇತರೆ ಕಾರ್ಯಕ್ರಮದ ನೆಪದಲ್ಲಿ ಕನ್ನಡ ನೆನಪು ಮಾಡಿಕೊಳ್ಳುತ್ತೇವೆ’ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿ ಮಾತನಾಡಿ, ಏಳು ಕೋಟಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ಸದಸ್ಯತ್ವ ಪಡೆಯುವುದರ ಜೊತೆಗೆ ಮಂಡ್ಯದಲ್ಲಿ ಡಿ.20 ರಿಂದ 23ರವರೆಗೆ ನಡೆಯುವ ಸಮ್ಮೇಳನದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ರಾಷ್ಟ್ರೋತ್ಥಾನ ಪರಿಷತ್ ಅಧ್ಯಕ್ಷ ಎಂ.ಪಿ.ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.