ಬೆಂಗಳೂರು: ‘ಕನ್ನಡ ಮತ್ತು ಮಲಯಾಳಂ ಭಾಷೆಯ ಮಧ್ಯೆ ಬಾಂಧವ್ಯ ಬೆಸೆಯಲು ಕೇರಳ ಗಡಿ ಭಾಗದಲ್ಲಿ ಕನ್ನಡ-ಮಲಯಾಳಿ ಸಾಹಿತ್ಯ ಸಮ್ಮೇಳನ ಆಯೋಜಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಗರದಲ್ಲಿ ಗುರುವಾರ ಹಮ್ಮಿಕೊಂಡ ಮಲಯಾಳಿ ಭಾಷಿಕರಿಗೆ ಕನ್ನಡ ಕಲಿಕಾ ತರಗತಿಗಳ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದರು.
‘ಕನ್ನಡ ಮತ್ತು ಮಲಯಾಳಂ ಭಾಷೆಗಳ ಮಧ್ಯೆ ಉತ್ತಮ ಬಾಂಧವ್ಯವಿದೆ. ಕೇರಳದ ಮಹಾತ್ಮರೆನಿಸಿದ ನಾರಾಯಣ ಗುರುಗಳ ಜಯಂತಿಯನ್ನು ರಾಜ್ಯ ಸರ್ಕಾರ ಆಚರಿಸುತ್ತಿದೆ. ಅನೇಕ ಮಲಯಾಳಿ ಸಾಹಿತ್ಯ ಕೃತಿಗಳು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಕನ್ನಡಕ್ಕೆ ಅನುವಾದಗೊಂಡು, ಪ್ರಕಟವಾಗಿವೆ. ನಾರಾಯಣ ಗುರುಗಳ ಸಾಹಿತ್ಯವನ್ನು ಸಹ ಕನ್ನಡ ಭಾಷೆಯಲ್ಲಿ ಅನುವಾದ ಮಾಡಿ, ಪ್ರಕಟಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ’ ಎಂದರು.
ಸಮ್ಮೇಳನದಿಂದ ಸಂಭ್ರಮ: ಸಮಾರಂಭ ಉದ್ಘಾಟಿಸಿ ಮಾತನಾಡಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ‘ಕನ್ನಡ-ಮಲಯಾಳಿ ಸಾಹಿತ್ಯ ಸಮ್ಮೇಳನ ಆಯೋಜನೆಯಾಗಬೇಕು. ಇದರಿಂದ ಮಲಯಾಳಿಗಳು ಹಾಗೂ ಕನ್ನಡಿಗರು ತಮ್ಮ ಭಾಷಾ ಪ್ರೇಮದ ಜತೆಗೆ ಸಾಹಿತ್ಯ ಸಂಭ್ರಮವನ್ನು ಸವಿಯಲು ಸಾಧ್ಯವಾಗುತ್ತದೆ. ಭಾಷೆ ಯಾವುದೆ ಇರಲಿ ಅದಕ್ಕೆ ತನ್ನದೆ ಆದ ಬಲ ಇರುತ್ತದೆ. ಒಂದು ಸಮಾಜದ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆ ಬೆಳೆಯುವುದೇ ಭಾಷೆಯಿಂದ. ಭಾಷೆ ಬಲಿಷ್ಠವಾದರೆ ಸಮಾಜವೂ ಬಲಿಷ್ಠವಾಗುತ್ತದೆ’ ಎಂದು ಹೇಳಿದರು.
ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ, ‘ಭಾರತದ ಒಕ್ಕೂಟ ವ್ಯವಸ್ಥೆ ಬಲಿಷ್ಠವಾಗಿ ಉಳಿಯಲು ರಾಜ್ಯ ಭಾಷೆಗಳು ಪ್ರಮುಖ. ಭಾಷೆ ದುರ್ಬಲವಾದರೆ ದೇಶದ ಒಕ್ಕೂಟ ವ್ಯವಸ್ಥೆ ದುರ್ಬಲವಾಗುತ್ತದೆ. ರಾಜ್ಯದಲ್ಲಿ 230ಕ್ಕೂ ಹೆಚ್ಚು ಭಾಷೆಗಳಿವೆ. ನಾವು ರಾಜ್ಯ ಭಾಷೆಯ ಜತೆಗೆ ಸಣ್ಣ ಭಾಷೆಗಳನ್ನು ಬೆಳೆಸಬೇಕು’ ಎಂದು ತಿಳಿಸಿದರು.
ಲೇಖಕ ಸುಧಾಕರನ್ ರಾಮಂತಳ್ಳಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ ಮತ್ತು ಮಲಯಾಳಂ ಮಿಷನ್‌ನ ಟಾಮಿ ಜೆ. ಅಲುಂಕಲ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.