ಬೆಂಗಳೂರು: ‘ವೈದ್ಯಕೀಯ ಕ್ಷೇತ್ರದಲ್ಲಿ ಕನ್ನಡ ಭಾಷಾ ಬಳಕೆ ಇಳಿಮುಖವಾಗುತ್ತಿದ್ದು, ವಿವಿಧ ಭಾಷೆಗಳಲ್ಲಿರುವ ಪ್ರಮುಖ ವೈದ್ಯಕೀಯ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಮೂಲಕ ಈ ಕ್ಷೇತ್ರದಲ್ಲಿ ಕನ್ನಡ ಉಳಿಸಿ ಬೆಳೆಸಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ಸಭೆಯನ್ನು ಬುಧವಾರ ನಡೆಸಿದ ಅವರು, ‘ವೈದ್ಯಕೀಯ ಕ್ಷೇತ್ರದಲ್ಲಿ ಕನ್ನಡ ಜ್ಞಾನವನ್ನು ಹೆಚ್ಚಿಸಬೇಕಿದೆ. ವಿಶೇಷವಾಗಿ ಕ್ಯಾನ್ಸರ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಶ್ವದ ಪ್ರಮುಖ ಪುಸ್ತಕಗಳನ್ನು ಅನುವಾದಿಸುವ ಕಾರ್ಯವನ್ನು ಸಂಸ್ಥೆ ಕೈಗೊಂಡಲ್ಲಿ, ಅದಕ್ಕೆ ಪ್ರಾಧಿಕಾರ ಬೆಂಬಲ ಸೂಚಿಸಲಿದೆ. ವೈದ್ಯರು ತಾವು ಬರೆಯುವ ಔಷಧ ಚೀಟಿಗಳಲ್ಲಿ ಕನಿಷ್ಠ ರೋಗಿಯ ಹೆಸರನ್ನಾದರೂ ಕನ್ನಡದಲ್ಲಿ ಬರೆದರೆ, ಅಲ್ಲಿಂದಲೇ ಕನ್ನಡ ಸೇವೆ ಪ್ರಾರಂಭವಾಗುತ್ತದೆ’ ಎಂದರು.
‘ಕಿದ್ವಾಯಿ ಸಂಸ್ಥೆಯಲ್ಲಿ ದಾಖಲಾಗುವ ಹಾಗೂ ಸುದೀರ್ಘ ಅವಧಿಗೆ ಚಿಕಿತ್ಸೆ ಪಡೆಯುವ ಕ್ಯಾನ್ಸರ್ ಪೀಡಿತ ಮಕ್ಕಳು ಶಾಲಾ ಚಟುವಟಿಕೆಗಳಿಂದ ದೂರ ಉಳಿಯುವ ಕಾರಣ, ಇಂತಹ ಮಕ್ಕಳ ಸಂವಹನ ಶಕ್ತಿಯನ್ನು ವೃದ್ಧಿಸಲು ಕಲಿಕೆಯ ಅಗತ್ಯತೆಯಿದೆ. ಈ ಬಗ್ಗೆ ಶಿಕ್ಷಣ ಇಲಾಖೆಯೊಂದಿಗೆ ಚರ್ಚೆ ನಡೆಸಿ, ಆಸ್ಪತ್ರೆಯ ಆವರಣದಲ್ಲಿ ಉತ್ತಮ ಗುಣಮಟ್ಟದ ವಿಶೇಷ ಪಠ್ಯಕ್ರಮವುಳ್ಳ ಶಾಲೆ ತೆರೆಯಲು ಸೂಚನೆ ನೀಡಲಾಗುವುದು’ ಎಂದು ಹೇಳಿದರು.
‘ಸಂಸ್ಥೆಯಲ್ಲಿ ಬಹುಪಾಲು ವೈದ್ಯರು ಕನ್ನಡಿಗರಾಗಿದ್ದು, ಶುಶ್ರೂಷಕಿಯರಲ್ಲಿ ಕನ್ನಡೇತರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಕನ್ನಡೇತರರಿಗೆ ಕನ್ನಡವನ್ನು ಕಲಿಸುವ ಪ್ರಯತ್ನಕ್ಕೆ ಸಂಸ್ಥೆ ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ತನ್ನ ಸಹಾಯ ಹಸ್ತವನ್ನು ನೀಡಲು ಸಿದ್ಧವಿದೆ. ಸಂಸ್ಥೆಯಲ್ಲಿ ಕನ್ನಡಿಗರ ಹಿತರಕ್ಷಣೆ ಮಾಡಲು ಕನ್ನಡ ಘಟಕವನ್ನು ಆರಂಭಿಸಬೇಕು’ ಎಂದು ಸೂಚಿಸಿದರು.
ಸಂಸ್ಥೆಯ ಆವರಣದಲ್ಲಿರುವ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಶೇ 60ರಷ್ಟು ಪ್ರಾತಿನಿಧ್ಯ ನೀಡಬೇಕೆಂದು ಸೂಚಿಸಿದ ಅವರು, ‘ಸಂಸ್ಥೆಯ ಕಟ್ಟಡ ಸಂಕೀರ್ಣಗಳು, ರಸ್ತೆಗಳಿಗೆ ನಾಡಿನ ಖ್ಯಾತ ವೈದ್ಯರು, ಸಾಹಿತಿಗಳ ಹೆಸರುಗಳನ್ನು ಇಡಬೇಕು. ಇತ್ತೀಚಿಗಷ್ಟೇ ಕ್ಯಾನ್ಸರ್ ತಜ್ಞೆ ಡಾ.ವಿಜಯಲಕ್ಷ್ಮೀ ದೇಶಮಾನೆ ಅವರು ‘ಪದ್ಮಶ್ರೀ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಸಂಸ್ಥೆಯ ಯಾವುದಾದರೂ ಪ್ರಮುಖ ಸಂಕೀರ್ಣಕ್ಕೆ ಅವರ ಹೆಸರನ್ನು ಇಡಬಹುದಾಗಿದೆ’ ಎಂದು ಸಲಹೆ ನೀಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ವಿ.ಪಿ.ನಿರಂಜನಾರಾಧ್ಯ, ಸಿ.ಎ.ಕಿಶೋರ್, ಕಾರ್ಯದರ್ಶಿ ಸಂತೋಷ ಹಾನಗಲ್ಲ, ಅಧ್ಯಕ್ಷರ ಆಪ್ತಕಾರ್ಯದರ್ಶಿ ಟಿ.ಎಸ್. ಫಣಿಕುಮಾರ್, ಕಿದ್ವಾಯಿ ಸಂಸ್ಥೆಯ ನಿರ್ದೇಶಕ ಡಾ. ನವೀನ್ ಟಿ. ಹಾಗೂ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.