ಬೆಂಗಳೂರು: ‘ಕರ್ನಾಟಕವು ಕನ್ನಡಮಯವಾಗಬೇಕು ಎಂಬುದು ನನ್ನ ಆಶಯ. ಅದಕ್ಕಾಗಿ ಕನ್ನಡ ಭಾಷೆ ಪರ, ಕನ್ನಡ ಅಭಿವೃದ್ಧಿಯ ಪರ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕನ್ನಡ ಮತ್ತು ಸಂಸ್ಖೃತಿ ಇಲಾಖೆಯಿಂದ ಜೀವಮಾನ ಸಾಧನೆಯ ವಿವಿಧ ಪ್ರಶಸ್ತಿಗಳನ್ನು ಗುರುವಾರ ಪ್ರದಾನ ಮಾಡಿ ಅವರು ಮಾತನಾಡಿದರು.
‘ನಾನು ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷನಾಗಿದ್ದೆ. ಕನ್ನಡ ರಾಜ್ಯಭಾಷೆಯಾಗಬೇಕು. ಆಡಳಿತ ಭಾಷೆಯಾಗಬೇಕು. ಕರ್ನಾಟಕದಲ್ಲಿ ಸಾರ್ವಭೌಮ ಭಾಷೆಯಾಗಬೇಕು ಎಂದು ಆಗಲೇ ತೀರ್ಮಾನ ಮಾಡಿದ್ದೆ. ಅಂದಿನ ಕಾವಲು ಸಮಿತಿಯೇ ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವಾಗಿದೆ’ ಎಂದು ತಿಳಿಸಿದರು.
ದ್ರಾವಿಡ ಭಾಷೆಗಳಲ್ಲಿಯೇ ಕನ್ನಡ ಅತ್ಯಂತ ಪ್ರಾಚೀನವಾದುದು. 2,000ಕ್ಕೂ ಅಧಿಕ ವರ್ಷಗಳ ಇತಿಹಾಸ ಇರುವ ಭಾಷೆ ಇದು. ಇಲ್ಲಿನ ವೈವಿಧ್ಯಮಯ ಸಂಸ್ಕತಿ ಮತ್ತು ಸಾಹಿತ್ಯ ಸಂಪತ್ತು ಬೇರೆ ರಾಜ್ಯಗಳಿಗೂ ಮಾದರಿ ಎಂದರು.
ವಿವಿಧ ರಂಗಗಳಲ್ಲಿ ಜೀವಮಾನ ಸಾಧನೆ ಮಾಡಿದ 23 ಮಂದಿಗೆ ಪ್ರಶಸ್ತಿ ನೀಡಲಾಗುತ್ತದೆ. ಮೂರು ರಾಷ್ಟ್ರೀಯ ಪ್ರಶಸ್ತಿಗಳಾಗಿದ್ದು, ₹ 10 ಲಕ್ಷ ನಗದು ಹಾಗೂ ಉಳಿದ ಪ್ರಶಸ್ತಿಗಳು ₹ 5 ಲಕ್ಷ ನಗದು ಹೊಂದಿವೆ. ಐದು ಪ್ರಶಸ್ತಿಗಳನ್ನು ಆಯಾ ಮಹನೀಯರ ಜಯಂತಿ ಸಂದರ್ಭದಲ್ಲಿ ನೀಡಲಾಗಿದ್ದು, ಉಳಿದ 18 ಪ್ರಶಸ್ತಿಗಳನ್ನು ಇಂದು ಪ್ರದಾನ ಮಾಡಲಾಗಿದೆ. ಅವರು ಈಗಾಗಲೇ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿ ರಾಜ್ಯದ ಸಾಂಸ್ಕೃತಿಕ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ ಮಾತನಾಡಿ, ‘ಜಗತ್ತಿನ ಇತಿಹಾಸದಲ್ಲಿ ಕನ್ನಡ ನಾಡಿನ ಚರಿತ್ರೆಗೆ ಮಹತ್ವದ ಸ್ಥಾನವಿದೆ. ವಿವಿಧ ಸಂಸ್ಕೃತಿಗಳ, ವಿವಿಧ ಉಪ ಭಾಷೆಗಳ, ವಿವಿಧ ಸಂಪ್ರದಾಯಗಳ, ವಿವಿಧ ಆಹಾರ ಕ್ರಮಗಳನ್ನು ಹೊಂದಿರುವ ವಿಶಿಷ್ಟ ನಾಡು ನಮ್ಮದು. ಪ್ರತಿ ನೂರು ಕಿಲೋಮೀಟರಿಗೆ ಭಾಷೆ, ಸಂಸ್ಕೃತಿ, ಸಂಪ್ರದಾಯಗಳು ಬದಲಾಗಿದ್ದರೂ ಎಲ್ಲರನ್ನೂ ಎಲ್ಲವನ್ನು ಒಟ್ಟಿಗೆ ಒಯ್ಯುವ ಶಕ್ತಿ ಕನ್ನಡಕ್ಕಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಶಸ್ತಿ ಪುರಸ್ಕೃತರ ಪರವಾಗಿ ಎಲ್. ಹನುಮಂತಯ್ಯ ಮಾತನಾಡಿ, ‘ನಮ್ಮ ರಾಜ್ಯದಲ್ಲಿ ಇರುವಷ್ಟು ಪ್ರಶಸ್ತಿಗಳು ದೇಶದ ಮತ್ಯಾವ ರಾಜ್ಯದಲ್ಲಿಯೂ ಇಲ್ಲ. ಅಲ್ಲದೇ ಪ್ರಶಸ್ತಿಗೆ ಅರ್ಹರ ಸಂಖ್ಯೆಯೂ ಇಲ್ಲಿ ಬಹಳ ದೊಡ್ಡದಿದೆ. ಸಾಹಿತಿಗಳಿಗೆ, ಕಲಾವಿದರಿಗೆ ತಮಗನ್ನಿಸಿದ್ದನ್ನು ಹೇಳುವ ಮುಕ್ತ ಸ್ವಾತಂತ್ರ್ಯ ರಾಜ್ಯದಲ್ಲಿದೆ. ಇಂಥದ್ದೇ ವಾತಾವರಣ ದೇಶದಲ್ಲಿಯೂ ಬರಬೇಕು’ ಎಂದು ಆಶಿಸಿದರು.
ಪ್ರಶಸ್ತಿ ಯಾರಿಗೆ
ಎ. ಶಾಂತಿರಾಜ ಶಾಸ್ತ್ರಿ ಟ್ರಸ್ಟ್ (ಮಹಾವೀರ ಶಾಂತಿ ಪ್ರಶಸ್ತಿ)
ಬಸಪ್ಪ ಎಚ್. ಭಜಂತ್ರಿ (ಟಿ. ಚೌಡಯ್ಯ)
ಬೇಗಂ ಪರ್ವೀನ್ ಸುಲ್ತಾನಾ (ಪಂಡಿತ್ ಪಂಚಾಕ್ಷರಿ ಗವಾಯಿ)
ಕೆ. ರಾಜಕುಮಾರ್ (ಸಂಗೊಳ್ಳಿ ರಾಯಣ್ಣ)
ಹೇಮಾ ಪಟ್ಟಣಶೆಟ್ಟಿ (ಅಕ್ಕಮಹಾದೇವಿ)
ಸ. ರಘುನಾಥ (ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ)
ವೈ.ಸಿ. ಭಾನುಮತಿ (ದಾನಚಿಂತಾಮಣಿ ಅತ್ತಿಮಬ್ಬೆ)
ಜೆ. ಲೋಕೇಶ್ (ಬಿ.ವಿ. ಕಾರಂತ)
ಕೆ. ನಾಗರತ್ನಮ್ಮ (ಗುಬ್ಬಿವೀರಣ್ಣ)
ಎಲ್. ಹನುಮಂತಯ್ಯ (ಸಿದ್ದಲಿಂಗಯ್ಯ ಸಾಹಿತ್ಯ)
ಎಂ.ಜೆ. ಕಮಲಾಕ್ಷಿ (ವರ್ಣಶಿಲ್ಪಿ ವೆಂಕಟಪ್ಪ)
ಎಂ. ರಾಮಮೂರ್ತಿ (ಜಕಣಾಚಾರಿ)
ನಿಂಗಪ್ಪ ಭಜಂತ್ರಿ (ಜಾನಪದಶ್ರೀ)
ದೊಡ್ಡ ಗವಿಬಸಪ್ಪ (ಜಾನಪದಶ್ರೀ)
ಅನಂತ ತೇರದಾಳ (ನಿಜಗುಣ–ಪುರಂದರ)
ಎ.ವಿ. ಪ್ರಸನ್ನ (ಕುಮಾರವ್ಯಾಸ)
ಪದ್ಮಿನಿ ರವಿ (ಶಾಂತಲಾ ನಾಟ್ಯ)
ಎಸ್. ಮಲ್ಲಣ್ಣ (ಸಂತ ಶಿಶುನಾಳ ಷರೀಫ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.