
ಬೆಂಗಳೂರು: ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಹೊರ ರಾಜ್ಯಗಳ ಅನ್ಯಭಾಷೆಯ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ವಿಶ್ವವಿದ್ಯಾಲಯದ ಬಹುತೇಕ ಆಡಳಿತ ವ್ಯವಹಾರ ಕನ್ನಡದಲ್ಲೇ ನಡೆಸಲಾಗುತ್ತಿದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಸಿ.ಭಗವಾನ್ ಹೇಳಿದರು.
ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕನ್ನಡ ಭಾಷೆಯ ಪ್ರಚಾರ–ಪ್ರಸಾರ ವಿಶ್ವವಿದ್ಯಾಲಯದ ಸಾಂಸ್ಕೃತಿಕ ಹೊಣೆಗಾರಿಕೆ, ಬೌದ್ಧಿಕ ಕರ್ತವ್ಯವೂ ಆಗಿದೆ. ಕನ್ನಡ ಬರಹಗಾರರನ್ನು ಪ್ರೋತ್ಸಾಹಿಸಲು ಹಾಗೂ ವೈದ್ಯಕೀಯ ಕನ್ನಡ ಸಾಹಿತ್ಯವನ್ನು ವಿಸ್ತರಿಸಲು ಪ್ರಸಾರಂಗದ ಮೂಲಕ ಅಮೂಲ್ಯ ಪುಸ್ತಕಗಳನ್ನು ಪ್ರಕಟಿಸಲಾಗುತ್ತಿದೆ’ ಎಂದರು.
‘ಕನ್ನಡ ವ್ಯವಹಾರ ಭಾಷೆಯಾಗಬೇಕು ಎಂಬ ಸಂಕಲ್ಪದ ಫಲವಾಗಿ ವಿಶ್ವವಿದ್ಯಾಲಯದ ಬಹುತೇಕ ಕಾರ್ಯಕ್ರಮಗಳು ಕನ್ನಡದಲ್ಲೇ ನಡೆಯುತ್ತಿವೆ. ವಿಶ್ವವಿದ್ಯಾಲಯದ ಗುರುತಿನ ಚಿಹ್ನೆಯಾಗಿ, ಭಾಷಾ ಅಸ್ಮಿತೆಯ ಸಂಕೇತವಾಗಿ ನಮ್ಮದೇ ಆದ ಕನ್ನಡ ಧ್ಯೇಯ ಗೀತೆಯನ್ನು ಪರಿಚಯಿಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.
ನಟ ಡಾಲಿ ಧನಂಜಯ ಮಾತನಾಡಿ, ‘ವೈದ್ಯನಾಗಬೇಕು ಎನ್ನುವ ಆಸೆ ಇತ್ತು. ಆದರೆ, ಕಡಿಮೆ ರ್‍ಯಾಂಕ್ ಬಂತು. ಹಣ ಕೊಟ್ಟು ಓದುವ ಅವಕಾಶ ಇಲ್ಲದ್ದಕ್ಕೆ ಎಂಜಿನಿಯರ್ ಕೋರ್ಸ್ ಮುಗಿಸಿದೆ. ವೈದ್ಯೆಯನ್ನು ಮದುವೆಯಾಗಿರುವುದು ಆ ಕೊರತೆಯನ್ನು ನೀಗಿಸಿದೆ’ ಎಂದರು.
ಹಾಸ್ಯಲೇಖಕ ಎಂ.ಎಸ್.ನರಸಿಂಹಮೂರ್ತಿ, ಕುಲಸಚಿವ ಅರ್ಜುನ್ ಒಡೆಯರ್, ಪರೀಕ್ಷಾಂಗ ಕುಲಸಚಿವ ಎಸ್.ರಿಯಾಜ್ ಬಾಷಾ, ಹಣಕಾಸು ಅಧಿಕಾರಿ ಬಿ.ಕೆ. ಗಂಗಾಧರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.