
ಬೆಂಗಳೂರು: ‘ರಾಜ್ಯದಾದ್ಯಂತ ವ್ಯಾಪಿಸಿರುವ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಕೈಗಾರಿಕಾ ಪ್ರದೇಶಗಳಲ್ಲಿ ಕನ್ನಡ ಸ್ನೇಹಿ ವಾತಾವರಣ ನಿರ್ಮಾಣವಾಗಬೇಕು. ಸರ್ಕಾರ ಈ ಬಗ್ಗೆ ಕೂಡಲೇ ಕ್ರಮಕ್ಕೆ ಮುಂದಾಗಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಅವರು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಅವರಿಗೆ ಪತ್ರ ಬರೆದಿದ್ದಾರೆ. ‘ಕೆಐಎಡಿಬಿ ಕೈಗಾರಿಕಾ ಪ್ರದೇಶಗಳಲ್ಲಿರುವ ಬಹುಪಾಲು ಕೈಗಾರಿಕೆಗಳು, ತಮ್ಮ ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಾಧಾನ್ಯ ನೀಡುತ್ತಿಲ್ಲ. ಆಡಳಿತ ವ್ಯವಸ್ಥೆಯಲ್ಲಿ ಕನ್ನಡವನ್ನು ಪೋಷಿಸದಿರುವುದು ರಾಜ್ಯದಾದ್ಯಂತ ಪ್ರವಾಸ ಕೈಗೊಂಡಾಗ ಗಮನಕ್ಕೆ ಬಂದಿದೆ’ ಎಂದು ಹೇಳಿದ್ದಾರೆ.
‘ನಾಡಿನ ನೆಲ, ಜಲ, ವಿದ್ಯುತ್ ಸೇರಿದಂತೆ ಎಲ್ಲದರಲ್ಲೂ ಆರ್ಥಿಕ ರಿಯಾಯಿತಿ, ಮೂಲ ಸೌಕರ್ಯಗಳನ್ನು ಪಡೆಯುವ ಕೈಗಾರಿಕೆಗಳು ಇಲ್ಲಿನ ಭಾಷೆ-ಸಂಸ್ಕೃತಿಗೆ ಗೌರವ ಕೊಡಬೇಕು. ಕನ್ನಡದ ಬಗೆಗೆ ಉಪೇಕ್ಷೆ ತೋರುವ ಸಂಸ್ಥೆಗಳಿಗೆ ದಂಡ ವಿಧಿಸುವ ಮೂಲಕ ಅವ್ಯವಸ್ಥೆಯನ್ನು ಸರಿಪಡಿಸಲು ಸರ್ಕಾರ ಮುಂದಾಗಬೇಕು’ ಎಂದು ಆಗ್ರಹಿಸಿದ್ದಾರೆ.
‘ಕೈಗಾರಿಕಾ ಪ್ರದೇಶಗಳಲ್ಲಿ ಸರ್ಕಾರ ನಿರ್ಮಿಸಿರುವ ರಸ್ತೆ, ನಿಲ್ದಾಣಗಳಿಗೆ ಸಾಧಕ ಕನ್ನಡಿಗರ ಹೆಸರುಗಳನ್ನು ಇಡಬೇಕು. ಈ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಕನ್ನಡಿಗರಿಗೆ ತಾವು ಪರಕೀಯರೆನ್ನುವ ಭಾವನೆ ಮೂಡದಿರುವಂತೆ ಮಾಡುವ ಸವಾಲು ಸರ್ಕಾರದ ಮುಂದಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.