ADVERTISEMENT

ಸಂಶೋಧಕರದು ಅಪ್ರಿಯ ಸತ್ಯಗಳ ಕ್ಷೇತ್ರ: ಗೊರುಚ

ವಿವಿಧ ಪ್ರಶಸ್ತಿ, ಪುರಸ್ಕಾರಗಳ ಪ್ರದಾನ ಸಮಾರಂಭ l ಕನ್ನಡ ಗೆಳೆಯರ ಬಳಗದಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2022, 20:20 IST
Last Updated 8 ಡಿಸೆಂಬರ್ 2022, 20:20 IST
ನಗರದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಸಂಶೋಧಕರಾದ ಡಾ.ದೇವರಕೊಂಡಾ ರೆಡ್ಡಿ, ಡಾ.ಎಚ್.ಎಸ್. ಗೋಪಾಲರಾವ್, ಪ್ರೊ.ಲಕ್ಷ್ಮಣ ತೆಲಗಾವಿ ಅವರಿಗೆ 'ಚಿದಾನಂದಮೂರ್ತಿ ಕನ್ನಡ ಸಂಸ್ಕೃತಿ ಪ್ರಶಸ್ತಿ' ಪ್ರದಾನ ಮಾಡಲಾಯಿತು. ಗೊ.ರು. ಚನ್ನಬಸಪ್ಪ, ವೂಡೇ ಪಿ. ಕೃಷ್ಣ, ಡಾ.ಆರ್ ಶೇಷಶಾಸ್ತ್ರಿ, ರಾ.ನಂ. ಚಂದ್ರಶೇಖರ್‌ ಇದ್ದರು.
ನಗರದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಸಂಶೋಧಕರಾದ ಡಾ.ದೇವರಕೊಂಡಾ ರೆಡ್ಡಿ, ಡಾ.ಎಚ್.ಎಸ್. ಗೋಪಾಲರಾವ್, ಪ್ರೊ.ಲಕ್ಷ್ಮಣ ತೆಲಗಾವಿ ಅವರಿಗೆ 'ಚಿದಾನಂದಮೂರ್ತಿ ಕನ್ನಡ ಸಂಸ್ಕೃತಿ ಪ್ರಶಸ್ತಿ' ಪ್ರದಾನ ಮಾಡಲಾಯಿತು. ಗೊ.ರು. ಚನ್ನಬಸಪ್ಪ, ವೂಡೇ ಪಿ. ಕೃಷ್ಣ, ಡಾ.ಆರ್ ಶೇಷಶಾಸ್ತ್ರಿ, ರಾ.ನಂ. ಚಂದ್ರಶೇಖರ್‌ ಇದ್ದರು.   

ಬೆಂಗಳೂರು: ‘ಸಂಶೋಧಕರು ಅಪ್ರಿಯ ಸತ್ಯಗಳನ್ನು ಹೇಳಬೇಕಾದ ಅನಿವಾರ್ಯತೆ ಎದುರಾದಾಗ ಭಾವೋದ್ವೇಗಕ್ಕೆ ಒಳಗಾಗದೆ ವಸ್ತುನಿಷ್ಠ ಅಧ್ಯಯನವನ್ನು ನಡೆಸಬೇಕು’ ಎಂದು ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ ಹೇಳಿದರು.

ಕನ್ನಡ ಗೆಳೆಯರ ಬಳಗ ಬುಧವಾರ ಶೇಷಾದ್ರಿಪುರಂ ಕಾಲೇಜಿನಲ್ಲಿ ಆಯೋಜಿಸಿದ್ದ ವಿವಿಧ ಪ್ರಶಸ್ತಿ ಮತ್ತು ಪುರಸ್ಕಾರಗಳ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕನ್ನಡದ ಹೆಸರಿನಲ್ಲಿ ನಾಡಿನಲ್ಲಿ ನೂರಾರು ಸಂಘಟನೆಗಳಿವೆ. ಆದರೆ, ಕನ್ನಡ ಗೆಳೆಯರ ಬಳಗವು ನೆರೆ, ಬರ ಪರಿಸ್ಥಿತಿಗಳಲ್ಲಿ ಮಾನವೀಯ ಕೆಲಸಗಳನ್ನು ಮಾಡುತ್ತ ಬಂದಿದೆ.ಬಳಗವು
ಕನ್ನಡದ ಕೆಲಸಗಳಿಗೆ ನಿಜವಾದ ಘನತೆಯನ್ನು ತಂದುಕೊಟ್ಟಿದೆ’ ಎಂದರು.

ADVERTISEMENT

ಸಂಶೋಧಕ ಆರ್. ಶೇಷಶಾಸ್ತ್ರಿ ಮಾತನಾಡಿ, ‘ಚಿದಾನಂದ ಮೂರ್ತಿ ಅವರು ಕನ್ನಡದ ಹಿತಕ್ಕಾಗಿ ಸಾತ್ವಿಕ ರೋಷದಿಂದ ತಾರ್ಕಿಕವಾಗಿ ಕೆಲಸ ಮಾಡಿದ ಅನುಪಮ ವಿದ್ವಾಂಸ
ರಾಗಿದ್ದರು’ ಎಂದು ಸ್ಮರಿಸಿದರು.

ಬಿಬಿಎಂಪಿ ಉಪ ಆಯುಕ್ತ ಡಾ.ಕೆ ಮುರಳೀಧರ, ಕನ್ನಡ ಗೆಳೆಯರ ಬಳಗದ ಸಂಚಾಲಕ ಬಾ. ಹ. ಉಪೇಂದ್ರ, ಕೇಂದ್ರೀಯ ಸದನ ಕನ್ನಡ ಸಂಘದ ಅಧ್ಯಕ್ಷ ಮ.ಚಂದ್ರಶೇಖರ ಇದ್ದರು.

ಪ್ರಶಸ್ತಿ ಪ್ರದಾನ: ಪ್ರೊ.ಲಕ್ಷ್ಮಣ ತೆಲಗಾವಿ, ಡಾ.ದೇವರಕೊಂಡಾ ರೆಡ್ಡಿ, ಡಾ.ಎಚ್.ಎಸ್. ಗೋಪಾಲರಾವ್ ಅವರಿಗೆ ಕ್ರಮವಾಗಿ 2020, 2021, 2022ನೇ ಸಾಲಿನ ಡಾ.ಎಂ ಚಿದಾನಂದಮೂರ್ತಿ ಕನ್ನಡ ಸಂಸ್ಕೃತಿ ಪ್ರಶಸ್ತಿ, ಬಾ.ಹ. ರಮಾಕುಮಾರಿ ಅವರಿಗೆ ಕನ್ನಡ ಅರವಿಂದ ಪ್ರಶಸ್ತಿ, ಸೈಮಬ್ ಬಾರ್ತಲೋಮಿಯೊ ಅವರಿಗೆ ಕನ್ನಡ ಚಿರಂಜೀವಿ ಪ್ರಶಸ್ತಿ, ವಿದುಷಿ ಶಾಮಲಾ ಪ್ರಕಾಶ್ ಅವರ ‘ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಸಂಗೀತದ ಸಾಹಚರ್ಯ’ ಕೃತಿಗೆ ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ, ಶಶಿಧರ ಹಾಲಾಡಿ ಮತ್ತು ಜ್ಞಾನಶ್ರೀ ಅವರಿಗೆ ಕ್ರಮವಾಗಿ ‘ಚಿತ್ತ ಹರಿದತ್ತ’ ಮತ್ತು ‘ಭವ್ಯ ಭಾರತದ ರಾಣಿಯರು’ ಕೃತಿಗಳಿಗೆ ಸಮಾಧಾನಕರ ಬಹುಮಾನ, ರು.ಬಸಪ್ಪ ಅವರ ‘ಕನ್ನಡ ಚಳವಳಿಯ ಪುಟಗಳಿಂದ’ ಕೃತಿಗೆ ವಿಶೇಷ ಬಹುಮಾನಗಳನ್ನು ಪ್ರದಾನ ಮಾಡಲಾಯಿತು.

ಜತೆಗೆ 2021–22ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕ ಗಳಿಸಿದ ಎಂ. ವರ್ಷಿಣಿ, ಎ.ಜ್ಯೋತಿ, ಎಸ್. ವಾಣಿ, ಎಚ್ಎಸ್ವಂದನಾ, ಎನ್.ಕೋಮಲ, ಎಂ.ರಕ್ಷಿತ, ಟಿ.ಎಂ. ಲಕ್ಷ್ಮೀ, ಎಚ್.ಎಸ್. ದೀಕ್ಷಿತಾ, ಬಿ. ಶ್ರುತಿ, ಎಂ. ಶಿವರಾಜ್ಅವರಿಗೆ ಸನ್ಮಾನಿಸಿ, ನಗದು ಬಹುಮಾನ ವಿತರಿಸಲಾಯಿತು.

ಅಲ್ಲದೆ, ಇಂಗ್ಲಿಷ್ಮಾಧ್ಯಮದಲ್ಲಿ ಓದಿ, ಕನ್ನಡ ಭಾಷೆ ವಿಷಯದಲ್ಲಿ ಅತ್ಯಧಿಕ ಅಂಕ ಗಳಿಸಿದ ಒಂಬತ್ತು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕೂಡ್ಲಿಗಿ ತಾಲ್ಲೂಕಿನ ನಾಗಲಾಪುರ ಸರಕಾರಿ ಶಾಲೆಗೆ ಕನ್ನಡ ಗೆಳೆಯರ ಬಳಗದಿಂದ ₹20 ಸಾವಿರ ಆರ್ಥಿಕ ನೆರವು ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.