ADVERTISEMENT

ಸಮಾಜಮುಖಿ ಸಮ್ಮೇಳನ|ಕನ್ನಡ ಶಾಲೆಗಳಿಗೆ ಬೀಗ, ವೃದ್ಧಿಯಾಗದ ಜ್ಞಾನ:ಭಾಷಾ ತಜ್ಞರ ಕಳವಳ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 16:18 IST
Last Updated 8 ನವೆಂಬರ್ 2025, 16:18 IST
<div class="paragraphs"><p>ಸಮಾಜಮುಖಿ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಾಹಿತ್ಯಾಸಕ್ತರು </p></div>

ಸಮಾಜಮುಖಿ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಾಹಿತ್ಯಾಸಕ್ತರು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಮಕ್ಕಳಲ್ಲಿ ಕನ್ನಡ ಭಾಷೆಯ ಬಗೆಗೆ ಅಭಿರುಚಿ ಬೆಳೆಸಬೇಕಾದ ಕನ್ನಡ ಮಾಧ್ಯಮ ಶಾಲೆಗಳಿಗೆ ಬೀಗ ಹಾಕಲಾಗುತ್ತಿದೆ. ಇಲ್ಲಿ ನೆಲೆ ಕಂಡುಕೊಂಡಿರುವ ಬಹುರಾಷ್ಟ್ರೀಯ ಕಂಪನಿಗಳು ಭಾಷೆಯನ್ನು ಬದಿಗಿಟ್ಟು, ಕೌಶಲಕ್ಕೆ ಮಾತ್ರ ಮಣೆ ಹಾಕುತ್ತಿವೆ. ಉನ್ನತ ಶಿಕ್ಷಣ ಹಾಗೂ ಜ್ಞಾನ ವೃದ್ಧಿಗೆ ಈಗಲೂ ಆಂಗ್ಲ ಭಾಷೆ ಹಾಗೂ ಅದರಲ್ಲಿನ ಸಾಹಿತ್ಯವನ್ನೇ ಅವಲಂಬಿಸಬೇಕಾಗಿದೆ...’

ADVERTISEMENT

ಹೀಗೆ ಕನ್ನಡ ಭಾಷೆಯ ಬಗೆಗಿನ ವಾಸ್ತವವನ್ನು ತೆರೆದಿಟ್ಟಿದ್ದು ಸಮಾಜಮುಖಿ ಪತ್ರಿಕೆ ವತಿಯಿಂದ ಹಮ್ಮಿಕೊಂಡಿದ್ದ ‘ಸಮಾಜಮುಖಿ’ ಸಾಹಿತ್ಯ ಸಮ್ಮೇಳನದ ‘ಕನ್ನಡದ ಭಾಷಾ ಬಿಕ್ಕಟ್ಟುಗಳು’ ಗೋಷ್ಠಿ. ಈ ಸಂದರ್ಭದಲ್ಲಿ ಕನ್ನಡವು ಅನ್ನದ ಭಾಷೆಯಾಗಿ ರೂಪುಗೊಳ್ಳಲು ಸಾಧ್ಯವೆ? ಕನ್ನಡದ ಈ ಸ್ಥಿತಿಗೆ ಯಾರು ಹೊಣೆ?  ಭಾಷೆಯ ಬಗೆಗಿನ ಕೀಳರಿಮೆ ಹೋಗಲಾಡಿಸುವುದು ಹೇಗೆ? ಇಂತಹ ಸಾಲು ಸಾಲು ಪ್ರಶ್ನೆಗಳನ್ನು ಹುಟ್ಟುಹಾಕಿದ ಈ ಗೋಷ್ಠಿಯಲ್ಲಿ, ಶಾಲೆಗಳ ಬಲವರ್ಧನೆ, ವಿಶ್ವವಿದ್ಯಾಲಯಗಳ ಕಾರ್ಯನಿರ್ವಹಣೆಯಲ್ಲಿ ಬದಲಾವಣೆ, ಆಯಾ ಕ್ಷೇತ್ರದ ತಜ್ಞರಿಂದ ಕನ್ನಡದಲ್ಲಿ ಸಾಹಿತ್ಯ ಸೃಷ್ಟಿ, ಸರ್ಕಾರ ಹಾಗೂ ವಿವಿಧ ಸಂಸ್ಥೆಗಳಿಂದ ಭಾಷೆ ಬಗೆಗಿನ ಕೀಳರಿಮೆ ಹೋಗಲಾಡಿಸುವಿಕೆಯಂತಹ ಸಲಹೆಗಳೂ ವ್ಯಕ್ತವಾದವು. 

‘ಕನ್ನಡ ಎದುರಿಸುತ್ತಿರುವ ಬಿಕ್ಕಟ್ಟನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು’ ಎಂಬ ಸಮನ್ವಯಕಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಮರ್ಶಕ ರಾಜೇಂದ್ರ ಚೆನ್ನಿ, ‘ನಮ್ಮ ಮನಸ್ಸು ವಸಾಹತೀಕರಣಗೊಂಡಿದೆ. ಇದರಿಂದಾಗಿ ಕನ್ನಡದಲ್ಲಿನ ಜ್ಞಾನ ಸ್ಥಳೀಯವಾದದ್ದು ಎಂಬ ತಪ್ಪು ತಿಳುವಳಿಕೆಯಿದೆ. ಈಗ ನಮ್ಮ ಮೇಲೆ ಯಾರೋ ಅಥವಾ ನಾವೇ ಹೇರಿಕೊಂಡಿರುವ ಮಾನಸಿಕ ವಸಹಾತುಶಾಹಿ ಲಕ್ಷಣಗಳನ್ನು ಗುರುತಿಸಬೇಕು’ ಎಂದರು. 

ಕನ್ನಡ ಶಾಲೆಗಳು ಬೀಗ ಹಾಕುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ‘8,500 ಕನ್ನಡ ಶಾಲೆಗಳು ಈಗಾಗಲೇ ಮುಚ್ಚಿವೆ. ಖಾಲಿ ಇರುವ 45 ಸಾವಿರ ಶಿಕ್ಷಕರ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿಲ್ಲ. ಕನ್ನಡವು ಉತ್ಪಾದನಾ ಭಾಷೆಯಲ್ಲ ಎಂದು ಪರಿಗಣಿಸಲಾಗಿದೆ. ‘ಬೆಂಗಳೂರಿನಲ್ಲಿ 10 ಲಕ್ಷ ಕೋಟಿ ರೂಪಾಯಿ ಹೂಡಿಕೆಯಿಂದ ಉದ್ಯೋಗ ಸೃಷ್ಟಿಯಾಗುತ್ತದೆ’ ಎಂದು ಕೈಗಾರಿಕಾ ಸಚಿವರು ಹೇಳುತ್ತಾರೆ. ಆದರೆ, ಎಷ್ಟು ಉದ್ಯೋಗ ಸೃಷ್ಟಿಯಾಗಿದೆ? ಹೂಡಿಕೆ ಮಾಡುವವರು ಕನ್ನಡಿಗರಲ್ಲ. ಉದ್ಯೋಗ ಸೃಷ್ಟಿಯಾದರೂ ಆ ಉದ್ಯೋಗ ಕೆಲ ಕೌಶಲವನ್ನು ನಿರೀಕ್ಷೆ ಮಾಡುತ್ತದೆ. ಆ ಕೌಶಲಗಳನ್ನು ನಮ್ಮ ವಿಶ್ವವಿದ್ಯಾಲಯಗಳು ವೃದ್ಧಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.  

ನಿವೃತ್ತ ಪ್ರಾಧ್ಯಾಪಕ ಎಸ್. ಚಂದ್ರಶೇಖರ್, ‘ಕನ್ನಡ ಮಾಧ್ಯಮದಲ್ಲಿ ಓದಿದರೆ ಕೆಲಸ ಸಿಗುವುದಿಲ್ಲ ಎಂಬ ವದಂತಿ ಎಲ್ಲೆಡೆ ಹಬ್ಬಿದೆ. ಅದು ನಿಜ ಕೂಡ ಹೌದು. ಕಂಪನಿಗಳು ಕೌಶಲವನ್ನು ಮಾತ್ರ ಪರಿಗಣಿಸುತ್ತಿವೆ. ಇಂಗ್ಲಿಷ್ ಶ್ರೀಮಂತರ ಭಾಷೆಯೆಂದು ಬಿಂಬಿತವಾದರೆ, ಕನ್ನಡ ಬಡವರ ಭಾಷೆಯಾಗಿ ಗುರುತಿಸಿಕೊಂಡಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಕನ್ನಡದ ಪಠ್ಯ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. 

ಸಂತೋಷ್ ನಾಯಕ್, ‘ಕನ್ನಡದಲ್ಲಿ ನಾವು ಸುಮಾರು ನೂರು ವರ್ಷಗಳು ಹಿಂದೆ ಇದ್ದೇವೆ. ಕನ್ನಡ ಭಾವನಾತ್ಮಕ ಭಾಷೆಯಾಗಿ ಬೆಳೆದರೆ, ಬೌದ್ಧಿಕವಾಗಿ ಏನೂ ಬೆಳೆದಿಲ್ಲ. ಕನ್ನಡದಲ್ಲಿ ಕಲಿಯಲು ಸರಿಯಾದ ವಾತಾವರಣ ಸೃಷ್ಟಿಸಿಲ್ಲ’ ಎಂದರು.  

ಕನ್ನಡ ಭಾಷೆಯ ಈ ಸ್ಥಿತಿಗೆ ಪರಕೀಯರ ಜತೆಗೆ ನಾವು ಕೂಡ ಕಾರಣ. ತರಗತಿಗಳು ಮತ್ತು ವೇದಿಕೆಗಳ ಮೇಲೆ ಕನ್ನಡದ ಬಗ್ಗೆ ಮಾತನಾಡುತ್ತೇವೆ. ನಾವು ಸರಿಯಾಗಿ ಭಾಷೆ ಬೆಳೆಸುತ್ತಿಲ್ಲ
ಎಲ್.ಎನ್. ಮುಕುಂದರಾಜ್ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ
ಜ್ಞಾನ ಪ್ರಸರಣಕ್ಕೆ ಸಂಬಂಧಿಸಿದಂತೆ ಸ್ಪರ್ಧೆ ನೀಡಲು ಕನ್ನಡ ಭಾಷೆಯಿಂದ ಸಾಧ್ಯವಾಗುತ್ತಿಲ್ಲ. ನಮ್ಮ ವಿಶ್ವವಿದ್ಯಾಲಯಗಳು ಈಗ ಕೆಲಸ ಮಾಡುವುದನ್ನೇ ನಿಲ್ಲಿಸಿವೆ
ಪೃಥ್ವಿದತ್ತ ಚಂದ್ರಶೋಭಿ ಇತಿಹಾಸಕಾರ

‘ಬೆಂಗಳೂರಿನ ಶಾಲೆಗಳು ಆಂಗ್ಲಮಯ’

ಪ್ರಾಥಮಿಕ ಹಂತದಲ್ಲಿ ಕಲಿಕೆಯ ಗುಣಮಟ್ಟ ಅಧೋಗತಿಗೆ ಹೋಗಿದೆ. ಶಿಕ್ಷಕರ ಕೊರತೆ ಕಳಪೆ ಗುಣಮಟ್ಟ ಸೇರಿ ಹಲವು ಕಾರಣಗಳಿವೆ. ಇದಕ್ಕೆ ಯಾರೂ ಜವಾಬ್ದಾರರಾಗುತ್ತಿಲ್ಲ. ಇಂಗ್ಲಿಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವವರ ಸಂಖ್ಯೆ ಜಾಸ್ತಿಯಾಗಿದೆ. 2024–25ನೇ ಸಾಲಿನಲ್ಲಿ 1ರಿಂದ 10ನೇ ತರಗತಿವರೆಗೆ 50.67 ಲಕ್ಷ ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದರೆ 49.92 ಲಕ್ಷ ಮಕ್ಕಳು ಕನ್ನಡ ಮಾಧ್ಯಮದವರಾಗಿದ್ದಾರೆ. ಬೆಂಗಳೂರಿನಲ್ಲಿ ಶೇ 71 ರಷ್ಟು ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಓದುತ್ತಿದ್ದಾರೆ. ಕಲಬುರಗಿ ಮತ್ತು ಬೆಳಗಾವಿಯಲ್ಲಿ ಮಾತ್ರ ಕನ್ನಡ ಮಾಧ್ಯಮದಲ್ಲಿ ಹೆಚ್ಚಿನ ಮಕ್ಕಳು ಓದುತ್ತಿದ್ದಾರೆ’ ಎಂದು ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ವೆಂಕಟೇಶ ಮಾಚಕನೂರ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.