ಬೆಂಗಳೂರು: ವರ್ಷದಿಂದ ವರ್ಷಕ್ಕೆ ಹಿಂದಿ ಭಾಷಿಕರ ಸಂಖ್ಯೆ ಹೆಚ್ಚುತ್ತಿದ್ದು ಕನ್ನಡ ಕೊನೆಯ ಸ್ಥಾನಕ್ಕೆ ಕುಸಿದಿದೆ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಆತಂಕ ವ್ಯಕ್ತಪಡಿಸಿದರು.
ಅನ್ನಪೂರ್ಣ ಪಬ್ಲಿಷಿಂಗ್ ಹೌಸ್‌ನ 25ನೇ ವರ್ಷದ ನೆನಪಿನಲ್ಲಿ ಸಮತಾ ಬಿ. ದೇಶಮಾನೆ ಸಂಪಾದಿಸಿದ 25 ಮಹಿಳಾ ಪುಸ್ತಕಗಳನ್ನು ಗುರುವಾರ ಜನಾರ್ಪಣೆಗೊಳಿಸಿ ಅವರು ಮಾತನಾಡಿದರು.
ಲಭ್ಯ ಇರುವ ಮಾಹಿತಿ ಪ್ರಕಾರ, ‘ಹಿಂದಿ ಮಾತನಾಡುವವರ ಪ್ರಮಾಣ 40 ವರ್ಷಗಳಲ್ಲಿ ಶೇ 66ರಷ್ಟು ಹೆಚ್ಚಾಗಿದೆ. 70 ಕೋಟಿ ಜನರು ಹಿಂದಿ ಭಾಷೆ ಬಳಸುತ್ತಿದ್ದಾರೆ. ಒಡಿಯಾ, ಮರಾಠಿ, ತೆಲುಗು. ತಮಿಳು, ಮಲೆಯಾಳ, ಪಂಜಾಬಿ ಭಾಷೆ ಬಳಸುವವರ ಪ್ರಮಾಣ ಶೇ 7ರಷ್ಟು ಹೆಚ್ಚಿದೆ. ಕನ್ನಡ ಭಾಷೆ ಬಳಕೆ ಪ್ರಮಾಣ ಹೆಚ್ಚಳ ಶೇ 3.73ರಷ್ಟು ಮಾತ್ರ ಹೆಚ್ಚಾಗಿದೆ’ ಎಂದು ವಿವರಿಸಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಮಾತನಾಡಿ, ‘ಪ್ರಾಧಿಕಾರದಿಂದ ಮನೆಗೊಂದು ಗ್ರಂಥಾಲಯ ಆರಂಭಿಸುವ ಅಭಿಯಾನ ಈಗಾಗಲೇ ಆರಂಭಿಸಲಾಗಿದೆ. ಒಂದು ಲಕ್ಷ ಮನೆಗಳಲ್ಲಿ ಕನಿಷ್ಠ 500 ಪುಸ್ತಕದೊಂದಿಗೆ ಗ್ರಂಥಾಲಯ ಆರಂಭಿಸಿ ಓದುವ, ಪುಸ್ತಕ ಖರೀದಿಸುವ ವ್ಯವಸ್ಥೆ ಬಲಪಡಿಸಲಾಗುತ್ತದೆ’ ಎಂದರು.
ಕರೀಗೌಡ ಬೀಚನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ವೈದ್ಯೆ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ, ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ, ವಾರ್ತಾ ಇಲಾಖೆಯ ಉಪನಿರ್ದೇಶಕಿ ಪಲ್ಲವಿ ಹೊನ್ನಾಪುರ, ಲೇಖಕಿಯರಾದ ವಿಜಯಾ, ಕೆ.ಟಿ. ಶಾಂತಲಾ, ಪದ್ಮಾ ನಾಗರಾಜು, ಪ್ರಕಾಶಕರಾದ ಕೆಂಪಣ್ಣ, ನಾಗರಾಜು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.