ADVERTISEMENT

ಹೋಟೆಲ್‌ ಕಾರ್ಮಿಕರಿಗೆ ಕನ್ನಡ ಕಲಿಸಿ: ಪುರುಷೋತ್ತಮ ಬಿಳಿಮಲೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 14:34 IST
Last Updated 12 ನವೆಂಬರ್ 2025, 14:34 IST
ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ. ಪ್ರಜಾವಾಣಿ ಚಿತ್ರ.
ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ. ಪ್ರಜಾವಾಣಿ ಚಿತ್ರ.   

ಬೆಂಗಳೂರು: ‘ರಾಜ್ಯದಾದ್ಯಂತ ನಗರ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಟೆಲ್‌ಗಳು ಮತ್ತು ಉಪಾಹಾರ ಗೃಹಗಳಲ್ಲಿ ಅನ್ಯಭಾಷಿಕ ಕಾರ್ಮಿಕರ ಸಂಖ್ಯೆ ವಿಪರೀತವಾಗಿ ಹೆಚ್ಚುತ್ತಿದೆ. ಸ್ಥಳೀಯರೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಅವರಿಗೆ ಕನ್ನಡ ಭಾಷೆ ಕಲಿಸುವ ಅಭಿಯಾನವನ್ನು ಸರ್ಕಾರ ಕೈಗೊಳ್ಳಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಅವರು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆದಿದ್ದಾರೆ. ‘ಅನ್ಯಭಾಷಿಕ ಕಾರ್ಮಿಕರನ್ನು ಕೆಲಸದಿಂದ ತೆಗೆದು, ಕನ್ನಡಿಗರನ್ನು ನೇಮಿಸಿ ಎನ್ನುವ ಆಗ್ರಹಗಳಿದ್ದರೂ ಅದು ಪ್ರಾಯೋಗಿಕವಾಗಿ ಕಾರ್ಯಸಾಧುವಲ್ಲ’ ಎಂದಿದ್ದಾರೆ.

‘ಹಿಂದಿ ಬಾರದ ಗ್ರಾಹಕರು ಅಸಹಾಯಕರಾಗಿ ಅನ್ಯಭಾಷಿಕ ಕಾರ್ಮಿಕರೊಂದಿಗೆ ಮಾತನಾಡಲು ಪ್ರಯತ್ನಿಸುವ ಘಟನೆಗಳು ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಇದರಿಂದ ಉಂಟಾಗಬಹುದಾದ ಸಂಘರ್ಷಗಳನ್ನು ಹತ್ತಿಕ್ಕುವ ಉದ್ದೇಶದಿಂದ ಸರ್ಕಾರವು ಈ ಕ್ರಮಕ್ಕೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿ, ಕನ್ನಡ ಕಲಿಸುವ ಪ್ರಯತ್ನಕ್ಕೆ ಮುಂದಾಗಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

‘ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡ ಕಲಿಕೆ ಬಗ್ಗೆ ವಿಶೇಷ ಪಠ್ಯವನ್ನು ಸಿದ್ಧಪಡಿಸಿದೆ. ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಕ್ರಮಕ್ಕೆ ಪ್ರಾಧಿಕಾರದ ಸಹಕಾರ ಇರುತ್ತದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.