ಬೆಂಗಳೂರು: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಜಂಟಿಯಾಗಿ ಮದರಸಾಗಳಲ್ಲಿ ಕನ್ನಡ ಕಲಿಕೆ ಯೋಜನೆ ಹಮ್ಮಿಕೊಂಡಿದ್ದು, ಈ ವರ್ಷ 180 ಮದರಸಾಗಳಲ್ಲಿ ಕನ್ನಡ ಕಲಿಕೆ ಪ್ರಾರಂಭಿಸುವ ಮೂಲಕ 1,500 ಕನ್ನಡೇತರ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವ ಗುರಿ ಹೊಂದಿವೆ.
ರಾಜ್ಯದ ಆಡಳಿತ ಭಾಷೆಯಾದ ಕನ್ನಡವನ್ನು ಸೌಹಾರ್ದತೆಯ ಸೇತುವೆಯಾಗಿ ಬಳಸಿಕೊಳ್ಳುವುದು ಈ ಯೋಜನೆಯ ಆಶಯವಾಗಿದ್ದು, ಮದರಸಾಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕನ್ನಡೇತರ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಲಾಗುತ್ತದೆ. ಕನ್ನಡೇತರರಿಗೆ ಕನ್ನಡ ಕಲಿಸಲು ಪ್ರಾಧಿಕಾರ ಸಿದ್ಧಪಡಿಸಿರುವ 36 ಗಂಟೆಗಳ ಕಲಿಕೆ ಪಠ್ಯದಲ್ಲಿ ಕನ್ನಡಕ್ಕೆ ಸಂಬಂಧಿಸಿದ ವಿವರಗಳು ಇಂಗ್ಲಿಷ್‌ನಲ್ಲಿವೆ. ಇದು ಮದರಸಾಗಳಲ್ಲಿ ಕನ್ನಡ ಕಲಿಕೆಗೆ ತೊಡಕಾಗಿದ್ದು, ಇಂಗ್ಲಿಷ್ ಭಾಗವನ್ನು ಉರ್ದು ಭಾಷೆಗೆ ಅನುವಾದ ಮಾಡಲಾಗುತ್ತಿದೆ. ಈ ಕಾರ್ಯವನ್ನು ಉರ್ದು ಅಕಾಡೆಮಿ ಕೈಗೆತ್ತಿಕೊಂಡಿದೆ.
ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ ತಿಂಗಳಲ್ಲಿಯೇ ತರಗತಿಗಳನ್ನು ಪ್ರಾರಂಭಿಸಲು ಪ್ರಾಧಿಕಾರ ಯೋಜನೆ ರೂಪಿಸಿದೆ. ಮದರಸಾಗಳಲ್ಲಿನ ಶಿಕ್ಷಕರಾದ ಮೌಲ್ವಿಗಳ ಮೂಲಕವೇ ಮಕ್ಕಳಿಗೆ ಕನ್ನಡ ಬೋಧಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಈಗಾಗಲೆ ಮೌಲ್ವಿಗಳಿಗೆ ಕನ್ನಡ ಕಲಿಕೆಗೆ ಸಂಬಂಧಿಸಿದಂತೆ ಕಾರ್ಯಾಗಾರವನ್ನೂ ನಡೆಸಲಾಗಿದೆ. ಪಠ್ಯದ ಇಂಗ್ಲಿಷ್ ಭಾಗ ಉರ್ದು ಭಾಷೆಗೆ ಅನುವಾದಗೊಂಡ ಬಳಿಕ ಮತ್ತೊಮ್ಮೆ ಕಾರ್ಯಾಗಾರ ನಡೆಸಿ, ಕನ್ನಡ ಕಲಿಕಾ ತರಗತಿಗಳನ್ನು ಮದರಸಾಗಳಲ್ಲಿ ಪ್ರಾರಂಭಿಸಲಾಗುತ್ತದೆ.
ಉರ್ದು ಬಾಹುಳ್ಯ ಪ್ರದೇಶ: ಮೈಸೂರು, ಬೆಂಗಳೂರು, ಕೋಲಾರ, ವಿಜಯಪುರ, ಕಲಬುರಗಿ ಸೇರಿ ವಿವಿಧ ಜಿಲ್ಲೆಗಳಲ್ಲಿ ಉರ್ದು ಬಾಹುಳ್ಯವಿರುವ ಪ್ರದೇಶಗಳಲ್ಲಿನ ಮದರಸಾಗಳಲ್ಲಿ ವಾರಕ್ಕೆ ಎರಡು ಅಥವಾ ಮೂರು ಗಂಟೆ ಕನ್ನಡ ಕಲಿಸಲಾಗುತ್ತದೆ. ಕಲಿಕೆಯ ಭಾಗವಾಗಿ ಕಿರು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಶೇ 90 ರಷ್ಟು ತರಗತಿಗಳಿಗೆ ಹಾಜರಾದವರಿಗೆ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ. ಸರಳ ಸಂವಹನ ಹಾಗೂ ಓದಲು ಬೇಕಾದಷ್ಟು ಕನ್ನಡವನ್ನು ಈ ತರಗತಿಯಲ್ಲಿ ಕಲಿಸಲಾಗುತ್ತದೆ. ಸುಮಾರು ಮೂರು ತಿಂಗಳು ಈ ತರಗತಿ ನಡೆಯಲಿದೆ.
‘ಅಲ್ಪಸಂಖ್ಯಾತ ಸಮುದಾಯ ಕನ್ನಡ ಕಲಿಯುವುದರಿಂದ ಮುಖ್ಯವಾಹಿನಿಗೆ ಬರುವ ಜತೆಗೆ, ಎಲ್ಲರೊಳಗೆ ಒಂದಾಗಿ ಬದುಕಲು ಸಾಧ್ಯವಾಗುತ್ತದೆ. ಸೌಹಾರ್ದತೆಯೂ ಸಾಕಾರವಾಗುವ ನಂಬಿಕೆಯಿದೆ. ಆದ್ದರಿಂದ ಈ ಯೋಜನೆ ಹಮ್ಮಿಕೊಂಡಿದ್ದೇವೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದರು.
ರಾಜ್ಯ ಭಾಷೆಯನ್ನು ಕಲಿತ ಸಮುದಾಯ ತಾನು ವಾಸಿಸುವ ನಾಡಿನಲ್ಲಿ ಸಾಮರಸ್ಯದಿಂದ ಜೀವಿಸಲು ತನ್ನದೇ ಆದ ಚೈತನ್ಯ ಪಡೆಯುತ್ತದೆ. ಹಾಗಾಗಿ ಅಲ್ಪಸಂಖ್ಯಾತರು ಕನ್ನಡ ಕಲಿಯುವುದು ಮುಖ್ಯಪುರುಷೋತ್ತಮ ಬಿಳಿಮಲೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
2 ಸಾವಿರಕ್ಕೆ ವಿಸ್ತರಿಸುವ ಗುರಿ
ಕನ್ನಡ ಕಲಿಕೆಯನ್ನು ಮುಂದಿನ ದಿನಗಳಲ್ಲಿ 2 ಸಾವಿರ ಮದರಸಾಗಳಿಗೆ ವಿಸ್ತರಿಸಲು ಅಲ್ಪಸಂಖ್ಯಾತರ ಆಯೋಗ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಯೋಜನೆ ರೂಪಿಸಿದೆ. ಈಗಾಗಲೇ ಕನ್ನಡ ಬೋಧಿಸಲು ಆಯ್ಕೆಯಾಗಿರುವ ಮದರಸಾಗಳ ಮೌಲ್ವಿಗಳೆ ವಲಯವಾರು ಉಳಿದ ಮದರಸಾಗಳ ಮೌಲ್ವಿಗಳಿಗೆ ಪ್ರಾಧಿಕಾರ ರೂಪಿಸಿದ ಕನ್ನಡ ಕಲಿಕಾ ಪಠ್ಯದ ಬಗ್ಗೆ ಕಾರ್ಯಾಗಾರ ನಡೆಸುತ್ತಾರೆ. ನಂತರ ಉಳಿದ ಮದರಸಾಗಳಲ್ಲಿಯೂ ಕನ್ನಡ ಕಲಿಕಾ ತರಗತಿಗಳು ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.