
ನಾಗಮಣಿ ಎಸ್. ರಾವ್ ಅವರಿಗೆ ‘ವಿ.ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿ’ ಮತ್ತು ಟಿ.ಪಿ. ಅಶೋಕ ಅವರಿಗೆ ‘ಪ್ರೊ.ಎಲ್.ಎಸ್. ಶೇಷಗಿರಿರಾವ್ ವಿಮರ್ಶಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಕೆ.ಆರ್. ಸಂಧ್ಯಾ ರೆಡ್ಡಿ, ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಶಾಂತರಾಜು, ಆರ್. ಲಕ್ಷ್ಮೀನಾರಾಯಣ ಮತ್ತು ಬೈರಮಂಗಲ ರಾಮೇಗೌಡ ಉಪಸ್ಥಿತರಿದ್ದರು
-ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಕನ್ನಡ ವಿಮರ್ಶೆಯು ಶಿಷ್ಟ ಸಾಹಿತ್ಯಕ್ಕೆ ಸೀಮಿತವಾಗಿದೆ. ವಿದ್ವತ್ ವಲಯವನ್ನು ಮಾತ್ರ ಗುರಿಯಾಗಿಟ್ಟುಕೊಳ್ಳದೆ, ಜನಪದ ಸಾಹಿತ್ಯವನ್ನೂ ವಿಮರ್ಶೆಗೆ ಒಳಪಡಿಸಬೇಕು’ ಎಂದು ಲೇಖಕಿ ಕೆ.ಆರ್. ಸಂಧ್ಯಾ ರೆಡ್ಡಿ ಹೇಳಿದರು.
ಬಿ.ಎಂ.ಶ್ರೀ. ಪ್ರತಿಷ್ಠಾನ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಮರ್ಶಕ ಟಿ.ಪಿ. ಅಶೋಕ ಅವರಿಗೆ ‘ಪ್ರೊ.ಎಲ್.ಎಸ್. ಶೇಷಗಿರಿರಾವ್ ವಿಮರ್ಶಾ ಪ್ರಶಸ್ತಿ’ ಹಾಗೂ ಪತ್ರಕರ್ತೆ ನಾಗಮಣಿ ಎಸ್. ರಾವ್ ಅವರಿಗೆ ‘ವಿ. ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿ’ ಪ್ರದಾನ ಮಾಡಿ, ಮಾತನಾಡಿದರು.
‘ಆಯ್ದ ಸಾಹಿತಿಗಳ ಕೃತಿಗಳನ್ನು ಮಾತ್ರ ವಿಮರ್ಶೆಗೆ ಒಳಪಡಿಸಲಾಗುತ್ತಿದೆ. ಸಾಮಾನ್ಯ ಓದುಗರನ್ನು ಬೆಳೆಸಿದವರೇ ಕಾದಂಬರಿಕಾರರು, ಲೇಖಕರು. ಹೀಗಾಗಿ, ಅವರನ್ನು ಮರೆಯಬಾರದು. ಕನ್ನಡ ಓದುಗರ ಸಂಖ್ಯೆ ಕಡಿಮೆಯಾಗಲು ಓದುಗರಿಗೆ ಆಸಕ್ತಿ ಹುಟ್ಟಿಸುವ ಸಾಹಿತ್ಯ ಸೃಷ್ಟಿಸುತ್ತಿಲ್ಲ. ಜಾನಪದ ರಾಮಾಯಣದಲ್ಲಿಯೇ ಮತ್ತಷ್ಟು ಕಥೆಗಳನ್ನು ಸೃಷ್ಟಿಸಬಹುದಾಗಿದೆ. ಜನಪದ ಮನಸ್ಸು ರಾಮಾಯಣ, ಮಹಾಭಾರತವನ್ನು ಹೇಗೆ ಗ್ರಹಿಸಿದೆ ಎಂಬುದನ್ನು ನೋಡಬೇಕಿದೆ’ ಎಂದು ಹೇಳಿದರು.
ಪ್ರತಿಷ್ಠಾನದ ಗೌರವಾಧ್ಯಕ್ಷ ಆರ್. ಲಕ್ಷ್ಮೀನಾರಾಯಣ, ‘ವಿಮರ್ಶೆಗೆ ಸಿಗಬೇಕಾದ ಪುರಸ್ಕಾರ ಸಿಗುತ್ತಿಲ್ಲ. ವಿಮರ್ಶಕನಿಗೆ ಸರಿಯಾದ ಗೌರವ ದೊರೆಯುತ್ತಿಲ್ಲ. ಕೆಲವು ಸಾರಿ ಸರಿಯಾದ ವಿಮರ್ಶೆಯೂ ಬರುತ್ತಿಲ್ಲ. ಬೇಕಾದವರು ಎಂಬ ಕಾರಣಕ್ಕೆ ಸಾಮಾನ್ಯ ಕೃತಿಯನ್ನೂ ಎತ್ತಿ ಹಿಡಿಯುವ ಪ್ರಕ್ರಿಯೆ ನಡೆಯುತ್ತಿದೆ. ವಿಮರ್ಶಕರ ಸಂಖ್ಯೆಯೂ ಕಡಿಮೆಯಾಗಿದೆ. ವಿಮರ್ಶೆ ಮತ್ತು ಮಾಧ್ಯಮ ಬಿಕ್ಕಟ್ಟು ಎದುರಿಸುತ್ತಿವೆ. ಕನ್ನಡ ವಿಮರ್ಶಾ ಕ್ಷೇತ್ರ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು’ ಎಂದರು.
ಟಿ.ಪಿ. ಅಶೋಕ, ‘ಲೇಖಕರ ಸಂಖ್ಯೆ ಜಾಸ್ತಿಯಾಗಿದೆ. ವರ್ಷಕ್ಕೆ 8 ಸಾವಿರ ಪುಸ್ತಕಗಳು ಪ್ರಕಟವಾಗುತ್ತಿವೆ. ಅರ್ಧದಷ್ಟು ಕೃತಿಗಳು ಕವಿತೆ ಹಾಗೂ ಕಥಾ ಸಂಕಲನವಾಗಿವೆ. ವಿಮರ್ಶೆಯ ಬರಹ ಕಡಿಮೆಯಾಗಿರುವ ಜತೆಗೆ, ಅದಕ್ಕೆ ಬೇಕಿರುವ ವೇದಿಕೆಯೂ ಸಿಗುತ್ತಿಲ್ಲ’ ಎಂದು ಹೇಳಿದರು.
ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.