ADVERTISEMENT

ಬದಲಾದ ಭಯಾನಕ ಬೆಂಗಳೂರು: ಜಾಣಗೆರೆ ವೆಂಕಟರಾಮಯ್ಯ

ವಿಶೇಷ ಉಪನ್ಯಾಸ ಗೋಷ್ಠಿಯಲ್ಲಿ ವಿಷಯ ತಜ್ಞರು ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 16:25 IST
Last Updated 11 ಮಾರ್ಚ್ 2023, 16:25 IST
ಶಿವಶರಣ ಕೆ. ಅರುಣಿ, ಜಾಣಗೆರೆ ವೆಂಕಟರಾಮಯ್ಯ ಮತ್ತು ಅರುಣ್ ಜಾವಗಲ್ ಸಮಾಲೋಚನೆ ನಡೆಸಿದರು. –ಪ್ರಜಾವಾಣಿ ಚಿತ್ರ
ಶಿವಶರಣ ಕೆ. ಅರುಣಿ, ಜಾಣಗೆರೆ ವೆಂಕಟರಾಮಯ್ಯ ಮತ್ತು ಅರುಣ್ ಜಾವಗಲ್ ಸಮಾಲೋಚನೆ ನಡೆಸಿದರು. –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘1960ರ ವೇಳೆ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಮಾತನಾಡಲೂ ಭಯ ಪಡಬೇಕಾದ ವಾತಾವರಣವಿತ್ತು. ನಿರಂತರ ಹೋರಾಟ, ಚಳವಳಿಗಳಿಂದ‌ ಈಗ ಕನ್ನಡಮಯ ವಾತಾವರಣ ನಿರ್ಮಾಣವಾಗಿದೆ. ಬದಲಾದ ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡ ಕನ್ನಡಿಗರು, ಕನ್ನಡಪರ ಕಾರ್ಯಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳದೆ ಮನೆಯಲ್ಲಿಯೇ ಕುಳಿತು ಟಿ.ವಿ ವೀಕ್ಷಿಸುತ್ತಿದ್ದಾರೆ.’

ಇವು ಕನ್ನಡ‍ಪರ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ಅವರ ನೋವಿನ ನುಡಿಗಳು. ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದಲ್ಲಿ ಶನಿವಾರ ಹಮ್ಮಿಕೊಂಡ 16ನೇ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ನಮ್ಮ ಬೆಂಗಳೂರು’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘60 ವರ್ಷದ ಹಿಂದೆ ಬೆಂಗಳೂರಿಗೆ ಬಂದಾಗ ಇಲ್ಲಿ ಇರಲು ಭಯ ಆಗುತ್ತಿತ್ತು. ಬಿನ್ನಿಪೇಟೆ ಸುತ್ತಮುತ್ತ ಕನ್ನಡದಲ್ಲಿ ಮಾತನಾಡಿದರೆ ಹೊಡೆಯುತ್ತಿದ್ದರು. ಬೆಂಗಳೂರಿನಲ್ಲಿ ನೂರು ಚಿತ್ರಮಂದಿರಗಳು ಇದ್ದವು. ಕೆಂಪೇಗೌಡ ವೃತ್ತ, ಜೆ.ಸಿ. ರಸ್ತೆಯಲ್ಲಿ ಇರುವ ಚಿತ್ರಮಂದಿರದಲ್ಲಿ ಮಾತ್ರ ಕನ್ನಡ ಚಲನಚಿತ್ರ ಪ್ರದರ್ಶನ ಕಾಣುತ್ತಿದ್ದವು. ಎರಡು ಚಿತ್ರಮಂದಿರ ಹೊರತುಪಡಿಸಿದರೆ ಉಳಿದ ಎಲ್ಲ ಚಿತ್ರಮಂದಿರಗಳಲ್ಲಿ ತಮಿಳು, ತೆಲುಗು, ಮಲಯಾಳಂ, ಹಿಂದಿ ಚಿತ್ರಗಳು ಪ್ರದರ್ಶನ ಕಾಣುತ್ತಿದ್ದವು. ಕೆಲ ಚಿತ್ರಮಂದಿರಗಳಲ್ಲಿ ರಾಜ್ಯೋತ್ಸವದ ದಿನದಂದು ಮಾತ್ರ ಮುಂಜಾನೆ ಒಂದು ಶೋ ಕನ್ನಡ ಚಲನಚಿತ್ರ ಹಾಕಿ, ಬಳಿಕ ಬೇರೆ ಭಾಷೆಯ ಚಲನಚಿತ್ರ ಹಾಕುತ್ತಿದ್ದರು. ಹಲಸೂರಿನಲ್ಲಿ ಇರುವ ಎಲ್ಲ ಚಿತ್ರಮಂದಿರಗಳಲ್ಲಿ ತೆಲುಗು ಚಲನಚಿತ್ರಗಳು ಪ್ರದರ್ಶನ ಕಾಣುತ್ತಿದ್ದವು’ ಎಂದು ಹೇಳಿದರು.

ADVERTISEMENT

‘ಬಿಇಎಲ್, ಎಚ್‌ಎಲ್ ಸೇರಿ ಎಲ್ಲ ಸಾರ್ವಜನಿಕ ಉದ್ಯಮ ಸಂಸ್ಥೆಗಳಲ್ಲಿಯೂ ಅನ್ಯಭಾಷಿಗರಿಗೆ ಆದ್ಯತೆ ನೀಡಲಾಗುತ್ತಿತ್ತು. ಕನ್ನಡಿಗರು ಶೇ 10ಕ್ಕಿಂತ ಕಡಿಮೆ ಇರುತ್ತಿದ್ದರು. ಈಗ ಬೆಂಗಳೂರಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನರು ವಲಸೆ ಬಂದಿದ್ದಾರೆ. ಇದರಿಂದಾಗಿ ಇಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಳವಾಗಿದೆ. ಆದರೆ, ಕನ್ನಡಿಗರು ಜಾತಿವಾಧಿಗಳಾಗಿ, ಪರಸ್ಪರ ಶತ್ರುಗಳಾಗುತ್ತಿದ್ದಾರೆ. ಅದೇ ನೆರೆಯ ರಾಜ್ಯ ತಮಿಳುನಾಡಿನಲ್ಲಿ ಅಲ್ಲಿಯವರು ಜಾತಿಯ ಬದಲು ಭಾಷೆಗೆ ಬೆಲೆ ನೀಡಿದ್ದಾರೆ. ಅವರನ್ನು ನೋಡಿ ನಾವು ಕಲಿಯಬೇಕು’ ಎಂದು ಹೇಳಿದರು.

ಮೂರು ಯುದ್ಧಗಳು: ‘ಬೆಂಗಳೂರಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ಥಿತ್ಯಂತರಗಳ ಐತಿಹಾಸಿಕ ನೋಟ’ ವಿಷಯದ ಬಗ್ಗೆ ಮಾತನಾಡಿದ ಭಾರತೀಯ ಅನುಸಂಧಾನ ಪರಿಷತ್ತಿನ ನಿರ್ದೇಶಕ ಶಿವಶರಣ ಕೆ. ಅರುಣಿ, ‘ಬೇಗೂರು ಶಾಸನದಲ್ಲಿ ಬೆಂಗಳೂರು ಕಾಳಗವನ್ನು ಪ್ರಸ್ತಾಪಿಸಲಾಗಿದೆ. ಬೇಗೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಜೈನ ಶಿಲ್ಪ, ಬಸದಿಗಳು ಇವೆ. ನಂದಿಬೆಟ್ಟದಲ್ಲಿ ಜೈನರ ಗುಹೆಯಿತ್ತು. ಗಂಗರಿಗೂ ನೊಳಂಬರಿಗೂ ನಡೆದ ಯುದ್ಧದಲ್ಲಿ ಜಯಗಳಿಸಿದ ನೊಳಂಬರು ಜೈನ ಸಂಸ್ಕೃತಿ ಅವನತಿಗೆ ಕಾರಣರಾದರು. 1338ರಲ್ಲಿ ಆದಿಲ್‌ಶಾಹಿಗಳು ಆಕ್ರಮಣ ಮಾಡಿದರು. ಬಳಿಕ ಸೂಫಿ ಸಂತರು ಇಲ್ಲಿಗೆ ಬಂದರು. ಹಿಂದೂ–ಮುಸ್ಲಿಂರ ವಾಸಸ್ಥಾನವಾಯಿತು. 1791ರಲ್ಲಿ ಕಾರ್ನ್‌ವಾಲಿಸ್ ವಶಪಡಿಸಿಕೊಂಡ ಬಳಿಕ ಬೆಂಗಳೂರು ಐರೋಪ್ಯ ಸಂಸ್ಕೃತಿಗಳಿಗೆ ತೆರೆದುಕೊಂಡಿತು’ ಎಂದು ತಿಳಿಸಿದರು.

‘ಪ್ರಥಮ ಮಹಾಯುದ್ಧವೂ ಬೆಂಗಳೂರಿನ ಮೇಲೆ ಪ್ರಭಾವ ಬೀರಿತು. ಆಗ ಇಲ್ಲಿ ಆಹಾರದ ಅಭಾವ ಉಂಟಾಗಿ, ರವಾ ಇಡ್ಲಿ ಸಂಶೋಧಿಸಲಾಯಿತು. ವಿಶ್ವ ಯುದ್ಧಗಳ ಬಳಿಕ ಬೆಂಗಳೂರು ವಿಜ್ಞಾನ ನಗರವಾಗಿ ಬೆಳೆಯಿತು’ ಎಂದು ಹೇಳಿದರು.

ಆತ್ಮವಿಶ್ವಾಸ ಕುಗ್ಗಿಸುವ ಹುನ್ನಾರ’

‘ಬೆಂಗಳೂರಿನ ಯಾವುದೇ ಭಾಗಕ್ಕೆ ಹೋದರೂ ಕನ್ನಡದಲ್ಲಿ ಸೇವೆ ಸಿಗುತ್ತದೆ. ಬೆಂಗಳೂರಿನಲ್ಲಿ ಕನ್ನಡಿಗರ ಪ್ರಮಾಣ ಕಡಿಮೆ ಎನ್ನುವುದು ನಮ್ಮ ಆತ್ಮವಿಶ್ವಾಸ ಕುಗ್ಗಿಸುವ ಹುನ್ನಾರವಾಗಿದೆ. ಮುಂಬೈ, ಕೋಲ್ಕತ್ತ ನಗರಗಳಿಗೆ ಹೋಲಿಸಿದರೆ ಇಲ್ಲಿನ ಜನಪ್ರತಿನಿಧಿಗಳು ಕನ್ನಡಿಗರಾಗಿದ್ದಾರೆ. ಬಿಬಿಎಂಪಿ, ಬೆಸ್ಕಾಂ ಸೇರಿ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಶೇ 99ರಷ್ಟು ಮಂದಿ ಕನ್ನಡಿಗರೇ ಆಗಿರುತ್ತಾರೆ. ಅನ್ಯ ರಾಜ್ಯಗಳ ವಲಸಿಗರೂ ಕನ್ನಡ ಕಲಿಯುವಂತೆ ಬಿಬಿಎಂಪಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಒತ್ತಡ ಹಾಕಬೇಕು’ ಎಂದು ಕನ್ನಡಪರ ಚಿಂತಕ ಅರುಣ್ ಜಾವಗಲ್ ಹೇಳಿದರು.

‘ವ್ಯಾಪಾರ ವ್ಯವಹಾರಕ್ಕೆ ಸಂಬಂಧಿಸಿದಂತೆ ಗ್ರಾಹಕರು ಕನ್ನಡ ಬಳಕೆ ಮಾಡಬೇಕು. ಬ್ಯಾಂಕ್, ಮಾಲ್ ಸೇರಿ ವಿವಿಧೆಡೆ ಕನ್ನಡದಲ್ಲಿ ಸೇವೆ ಸಿಗದಿದ್ದಲ್ಲಿ ಇರುವ ವೇದಿಕೆಗಳನ್ನು ಬಳಸಿಕೊಂಡು, ಪ್ರತಿಭಟಿಸಬೇಕು. ಬೆಂಗಳೂರಿನಲ್ಲಿ ಕನ್ನಡದ ವಾತಾವರಣ ನಿರ್ಮಿಸಲು ಸರ್ಕಾರವು ವಾರ್ಡ್ ಮಟ್ಟದಲ್ಲಿ ಕನ್ನಡ ಕಲಿಕಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.