ADVERTISEMENT

ಘಟಿಕೋತ್ಸವದಲ್ಲಿ ಕನ್ನಡ ಕಡೆಗಣನೆ; ಬೆಂಗಳೂರು ನಗರ ವಿವಿ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಜುಲೈ 2023, 16:02 IST
Last Updated 13 ಜುಲೈ 2023, 16:02 IST
ಬೆಂಗಳೂರು ನಗರ ವಿಶ್ವವಿದ್ಯಾಲಯ
ಬೆಂಗಳೂರು ನಗರ ವಿಶ್ವವಿದ್ಯಾಲಯ   

ಬೆಂಗಳೂರು: ಘಟಿಕೋತ್ಸವದಲ್ಲಿ ಕನ್ನಡ ಕಡೆಗಣಿಸಿರುವ ಬೆಂಗಳೂರು ನಗರ ವಿಶ್ವವಿದ್ಯಾಲಯದ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಕನ್ನಡ ಗೆಳೆಯರ ಬಳಗ ಸರ್ಕಾರಕ್ಕೆ ಆಗ್ರಹಿಸಿದೆ. 

‘2023ರ ಜುಲೈ 10ರಂದು ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಘಟಿಕೋತ್ಸವ ಕಾರ್ಯಕ್ರಮ ಸಂಪೂರ್ಣ ಇಂಗ್ಲಿಷ್ ಮಯವಾಗಿತ್ತು. ಕುಲಪತಿ  ಪ್ರೊ. ಲಿಂಗರಾಜ ಗಾಂಧಿ ಅವರು ಇಂಗ್ಲಿಷ್‌ನಲ್ಲಿಯೇ ಸ್ವಾಗತಿಸಿ, ವರದಿಯನ್ನು ಇಂಗ್ಲಿಷ್‌ನಲ್ಲಿಯೇ ಮಂಡಿಸಿದರು. ಭಿತ್ತಿ ಫಲಕವು ಇಂಗ್ಲಿಷ್‌ನಲ್ಲಿಯೇ ರಾರಾಜಿಸುತ್ತಿತ್ತು. ಕಾಟಾಚಾರಕ್ಕೆ ಒಂದೆರಡು ಸಾಲನ್ನು ಕನ್ನಡದಲ್ಲಿ ಬರೆಯಲಾಗಿತ್ತು. ಇದು ಸರ್ಕಾರಿ ಆದೇಶದ ಉಲ್ಲಂಘನೆಯಾಗಿದೆ’ ಎಂದು ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

‘ಕನ್ನಡ ಬಳಕೆಯ ಬಗ್ಗೆ 300ಕ್ಕೂ ಹೆಚ್ಚು ಸರ್ಕಾರಿ ಆದೇಶಗಳಿವೆ. ಆದರೂ ರಾಜ್ಯ ಸರ್ಕಾರದ ಅಧೀನ ವಿಶ್ವವಿದ್ಯಾಲಯವೇ ಕನ್ನಡ ಬಳಸದಿರುವುದು ಬೇಸರದ ಸಂಗತಿ. ಪಕ್ಕದ ತಮಿಳುನಾಡಿನಲ್ಲಿ ಪ್ರಧಾನಿ ಪಾಲ್ಗೊಂಡ ಘಟಿಕೋತ್ಸವ ಸಮಾರಂಭವು ತಮಿಳಿನಲ್ಲಿ ಇರುತ್ತದೆ. ಕರ್ನಾಟಕದಲ್ಲಿ ರಾಜ್ಯದ ಮಂತ್ರಿಗಳು, ರಾಜ್ಯಪಾಲರು ಪಾಲ್ಗೊಂಡ ಘಟಿಕೋತ್ಸವ ಇಂಗ್ಲಿಷ್‌ನಲ್ಲಿ ಇರುತ್ತದೆ. ಇದು ನಾಚಿಕೆಗೇಡಿನ ಸಂಗತಿ. ಕನ್ನಡವನ್ನು ತಿರಸ್ಕರಿಸಿದ ಕುಲಪತಿ ಲಿಂಗರಾಜು ಗಾಂಧಿ ಅವರ  ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.