ADVERTISEMENT

ಕನ್ನಡದ ತೇರನ್ನು ಒಂದಾಗಿ ಎಳೆದ ಚಿಣ್ಣರು

ಕಂಠೀರವ ಕ್ರೀಡಾಂಗಣ: ಸಾಂಸ್ಕೃತಿಕ ವೈಭವ ಅನಾವರಣ l 7 ಸಾವಿರಕ್ಕೂ ಅಧಿಕ ಮಕ್ಕಳು ಭಾಗಿ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 6:53 IST
Last Updated 2 ನವೆಂಬರ್ 2019, 6:53 IST
ದಕ್ಷಿಣ ವಲಯ 3ರ ವಿದ್ಯಾರ್ಥಿಗಳು ಕನ್ನಡ ಬಾವುಟ ಹಿಡಿದು ಪಥಸಂಚಲನ ನಡೆಸಿದರು  –ಪ್ರಜಾವಾಣಿ ಚಿತ್ರ
ದಕ್ಷಿಣ ವಲಯ 3ರ ವಿದ್ಯಾರ್ಥಿಗಳು ಕನ್ನಡ ಬಾವುಟ ಹಿಡಿದು ಪಥಸಂಚಲನ ನಡೆಸಿದರು  –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ವಾಸ್ತುಶಿಲ್ಪ ಹಾಗೂ ನೈಸರ್ಗಿಕ ಸಂಪತ್ತನ್ನು ವಿದ್ಯಾರ್ಥಿಗಳು ನೃತ್ಯಗಳ ಮೂಲಕ ಅನಾವರಣ ಮಾಡಿದರು. ‘ನಾವೆಲ್ಲರೂ ಒಂದಾಗಿ ಮುನ್ನಡೆಯೋಣ’ ಎಂಬ ಸಂದೇಶ ಸಾರುತ್ತಾ, ಚಿಣ್ಣರು ಕನ್ನಡದ ತೇರನ್ನು ಎಳೆದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ 64ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಮಕ್ಕಳ ಮೇಳ ಕಾರ್ಯಕ್ರಮದಲ್ಲಿ ಕಂಠೀರವ ಕ್ರೀಡಾಂಗಣದ ಎಲ್ಲೆಡೆ ಕನ್ನಡದ ಧ್ವಜಗಳು ರಾರಾಜಿಸಿದವು. ನಗರದ 71 ಶಾಲೆಗಳ 7,200 ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

12 ಶಾಲೆಗಳ ಮಕ್ಕಳು ಪಥಸಂಚಲನದಲ್ಲಿ ಭಾಗವಹಿಸಿ, ರಾಷ್ಟ್ರ ಹಾಗೂ ನಾಡಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದರು. ಕನ್ನಡ ಧ್ವಜ ಹಾಗೂ ತ್ರಿವರ್ಣ ಧ್ವಜಗಳ ಪಥಸಂಚಲನ ಕೂಡಾ ನಡೆಯಿತು. ಥಣಿಸಂದ್ರದ ಸರ್ಕಾರಿ ಪ್ರೌಢಶಾಲೆಯ 510 ವಿದ್ಯಾರ್ಥಿಗಳು ‘ಎಳೆಯೋಣ ಬಾರಾ ಕನ್ನಡದ ತೇರು’ ಗೀತೆಗೆ ಹೆಜ್ಜೆ ಹಾಕಿದರು. ಯಕ್ಷಗಾನ, ಜನಪದ ಸೇರಿದಂತೆ ವಿವಿಧ ಕಲಾ ಪ್ರಕಾರಗಳನ್ನು ಒಳಗೊಂಡ ನೃತ್ಯ ಪ್ರದರ್ಶಿಸಿದರು. ಭುವನೇಶ್ವರಿಯ ತೇರನ್ನು ಎಳೆಯುವ ಮೂಲಕ ಮಕ್ಕಳು ಕನ್ನಡದ ಕಂಪನ್ನು ಸಾರಿದರು.

ADVERTISEMENT

ದಕ್ಷಿಣ ವಲಯ-1ರ 5 ಶಾಲೆಯಿಂದ 700 ಮಕ್ಕಳು ‘ಅರಳುವ ಪುಷ್ಪಗಳು’ ನೃತ್ಯ ರೂಪಕ ಪ್ರದರ್ಶಿಸಿದರು. ಕಗ್ಗಲಿಪುರ ಕರ್ನಾಟಕ ಪಬ್ಲಿಕ್ ಶಾಲೆಯ 600 ಮಕ್ಕಳು ‘ವೀರ ಮದಕರಿ ನಾಯಕ’ ನೃತ್ಯರೂಪಕ ಪ್ರದರ್ಶಿಸಿ, ವೀರಮದಕರಿ ನಾಯಕನ ಆಳ್ವಿಕೆಯ ಕಾಲದಲ್ಲಿನ ಗತವೈಭವವನ್ನು ಪ್ರಸ್ತುತಪಡಿಸಿದರು. ಓಬವ್ವ ಮೆರೆದ ಸಾಹಸ, ವೀರಮದಕರಿಯ ಮೇಲೆ ಹೈದರಾಲಿ ಯುದ್ಧ ಸಾರಿದ ಸಂದರ್ಭವನ್ನು ನೃತ್ಯರೂಪಕದ ಮೂಲಕ ಕಟ್ಟಿಕೊಟ್ಟರು.

ದಕ್ಷಿಣ ವಲಯ-2ರ ಐದು ಶಾಲೆಯ 650 ವಿದ್ಯಾರ್ಥಿಗಳು ‘ಸುಗ್ಗಿಕಾಲ ಹಿಗ್ಗಿ ಬಂದಿತು’ ನೃತ್ಯರೂಪಕ ಮತ್ತು ದಕ್ಷಿಣ ವಲಯ 1 ಮತ್ತು 4ರ 875 ವಿದ್ಯಾರ್ಥಿಗಳು ‘ಯೋಗಾಸನ’ ಮಾಡಿದರು.

ಚನ್ನಮ್ಮನಿಗೆ ಸನ್ಮಾನ: ದಕ್ಷಿಣ ವಲಯ-3ರ 600 ವಿದ್ಯಾರ್ಥಿಗಳು ‘ಕಿತ್ತೂರು ರಾಣಿ ಚನ್ನಮ್ಮ ನೃತ್ಯ ರೂಪಕ’ವನ್ನು ಪ್ರದರ್ಶಿಸಿದರು. ಬ್ರಿಟಿಷರ ವಿರುದ್ಧ ಚೆನ್ನಮ್ಮ ಹೋರಾಡಿದ ಪರಿಯನ್ನು ವಿದ್ಯಾರ್ಥಿಗಳು ಮನ ಮುಟ್ಟುವಂತೆ ಪ್ರದರ್ಶಿಸಿದರು. ಚನ್ನಮ್ಮನ ಪಾತ್ರದಲ್ಲಿ ಕಾಣಿಸಿಕೊಂಡ ವಿದ್ಯಾರ್ಥಿನಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸನ್ಮಾನಿಸಿದರು.

ದಕ್ಷಿಣ ವಲಯ 1,2 ಹಾಗೂ 3ರ 28 ಶಾಲೆಗಳ 1,800 ವಿದ್ಯಾರ್ಥಿಗಳು ಸಾಮೂಹಿಕ ಕವಾಯತು ನಡೆಸಿದರು.

ಅಂಕಿ–ಅಂಶಗಳು
7,200:ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳು
1,800:ಸಾಮೂಹಿಕ ಕವಾಯತುವಿನಲ್ಲಿ ಭಾಗವಹಿಸಿದ ಮಕ್ಕಳು
138:ಮಕ್ಕಳನ್ನು ಕರೆತಂದ ಬಿಎಂಟಿಸಿ ಬಸ್‌ಗಳ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.