ADVERTISEMENT

ನಿಷ್ಕಳಂಕವಾಗಿ ಬಾಳಿದ ಸಿದ್ದಲಿಂಗಯ್ಯ; ಅಗಲಿದ ಸಾಹಿತಿಗೆ ಒಡನಾಡಿಗಳಿಂದ ನುಡಿ ನಮನ

​ಪ್ರಜಾವಾಣಿ ವಾರ್ತೆ
Published 15 ಮೇ 2025, 23:34 IST
Last Updated 15 ಮೇ 2025, 23:34 IST
ಕಾರ್ಯಕ್ರಮದಲ್ಲಿ ಶಿವರುದ್ರ ಸ್ವಾಮೀಜಿ, ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಗೊ.ರು. ಚನ್ನಬಸಪ್ಪ, ಮಹೇಶ ಜೋಶಿ, ಕೆ.ವಿ. ನಾಗರಾಜಮೂರ್ತಿ, ಕೆ.ಇ. ರಾಧಾಕೃಷ್ಣ ಮತ್ತು ಆರ್. ಲಕ್ಷ್ಮೀನಾರಾಯಣ ಅವರು ಜಿ.ಎಸ್. ಸಿದ್ದಲಿಂಗಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು
–ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಶಿವರುದ್ರ ಸ್ವಾಮೀಜಿ, ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಗೊ.ರು. ಚನ್ನಬಸಪ್ಪ, ಮಹೇಶ ಜೋಶಿ, ಕೆ.ವಿ. ನಾಗರಾಜಮೂರ್ತಿ, ಕೆ.ಇ. ರಾಧಾಕೃಷ್ಣ ಮತ್ತು ಆರ್. ಲಕ್ಷ್ಮೀನಾರಾಯಣ ಅವರು ಜಿ.ಎಸ್. ಸಿದ್ದಲಿಂಗಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಾರ್ವಜನಿಕ ಜೀವನದಲ್ಲಿ ಪ್ರಮುಖ ಸ್ಥಾನಗಳಲ್ಲಿದ್ದರೂ ನಿಷ್ಕಳಂಕರಾಗಿ ಬಾಳಿದ ಜಿ.ಎಸ್. ಸಿದ್ದಲಿಂಗಯ್ಯ, ಕನ್ನಡ ಸಾಹಿತ್ಯ ಪರಿಷತ್ತಿಗೂ ನೈತಿಕ ಶಕ್ತಿ ತುಂಬಿದ್ದರು’ ಎಂದು ಅವರ ಒಡನಾಡಿಗಳು ಸ್ಮರಿಸಿಕೊಂಡರು. 

ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಪ್ರೊ.ಜಿ.ಎಸ್. ಸಿದ್ದಲಿಂಗಯ್ಯ ನುಡಿ ನಮನ’ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಪ್ರಮುಖರು ಮನದಾಳ ಹಂಚಿಕೊಂಡರು. 

ಕಸಾಪ ಅಧ್ಯಕ್ಷ ಮಹೇಶ ಜೋಶಿ, ‘ಸಿದ್ದಲಿಂಗಯ್ಯ ಅವರು ಪರಿಷತ್ತಿನ ಅಧಿಕಾರ ವಹಿಸಿಕೊಂಡಾಗ, ಪರಿಷತ್ತು ಸಂದಿಗ್ಧ ಸನ್ನಿವೇಶದಲ್ಲಿತ್ತು. ಆ ಸಂದರ್ಭದಲ್ಲಿ ನುಡಿದಂತೆ ನಡೆದ ಅವರು, ತಮ್ಮ ಅವಧಿಯಲ್ಲಿ ಪರಿಷತ್ತಿಗೆ ಬಹುಮುಖ ಕೊಡುಗೆಗಳನ್ನು ನೀಡಿದರು. ಮಾರ್ಗದರ್ಶಕರಾಗಿದ್ದ ಅವರು, ಇತ್ತೀಚಿನವರೆಗೂ ಪರಿಷತ್ತಿನ ಏಳ್ಗೆಗೆ ಸಲಹೆಗಳನ್ನು ನೀಡುತ್ತಿದ್ದರು’ ಎಂದು ಸ್ಮರಿಸಿಕೊಂಡರು. 

ADVERTISEMENT

ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ‘ಕಪಟತನ ಇರದ, ಆತ್ಮರತಿಗೆ ಒಳಗಾಗದ ಪರಿಶುದ್ಧ ವ್ಯಕ್ತಿತ್ವ ಅವರದಾಗಿತ್ತು. ಸಾರ್ವಜನಿಕ ಜೀವನದಲ್ಲಿ ಪ್ರಮುಖ ಸ್ಥಾನಗಳಲ್ಲಿದ್ದೂ, ನಿಷ್ಕಳಂಕವಾಗಿ ಬಾಳಿದ ಅಪರೂಪದ ವ್ಯಕ್ತಿ ಅವರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಬೇಲಿಮಠದ ಶಿವರುದ್ರ ಸ್ವಾಮೀಜಿ, ‘ಎಲ್ಲರೊಂದಿಗೆ ಒಂದಾಗಿ, ಎಲ್ಲರಿಗೂ ಬೇಕಾಗಿ ಬಾಳಿದವರು ಸಿದ್ದಲಿಂಗಯ್ಯ’ ಎಂದರು. 

ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ, ‘ಸಿದ್ದಲಿಂಗಯ್ಯ ಅವರಿಗೆ ಸಿಟ್ಟಿನಷ್ಟೇ ಸಂಯಮವೂ ಇತ್ತು’ ಎಂದು ಸ್ಮರಿಸಿಕೊಂಡರು.

ಕರ್ನಾಟಕ ನಾಟಕ ಅಕಾಡಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಬರಹಗಾರರಾದ ಮಂಡಗದ್ದೆ ಶ್ರೀನಿವಾಸಯ್ಯ, ಕೆ.ಇ.ರಾಧಾಕೃಷ್ಣ, ತುಮಕೂರು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ಬಿ.ಎಂ.ಶ್ರೀ. ಪ್ರತಿಷ್ಠಾನದ ಗೌರವಾಧ್ಯಕ್ಷ ಆರ್.ಲಕ್ಷ್ಮೀನಾರಾಯಣ, ಪ್ರಾಧ್ಯಾಪಕರಾದ ಕಾ.ವೆಂ.ಶ್ರೀನಿವಾಸಮೂರ್ತಿ ಹಾಗೂ ರುದ್ರೇಶ ಅದರಂಗಿ ಅವರು ಸಿದ್ದಲಿಂಗಯ್ಯ ಅವರ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. 

ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗಶೆಟ್ಟಿ, ಪದ್ಮಿನಿ ನಾಗರಾಜು, ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.