ADVERTISEMENT

‘ಕಸಾಪ: ಬೈ–ಲಾ ತಿದ್ದುಪಡಿಗೆ ಕಾರ್ಯಕಾರಿ ಒಪ್ಪಿಗೆ ಪಡೆದಿಲ್ಲ’

ಸಹಕಾರ ಸಂಘಗಳ ಉಪನಿಬಂಧಕರಿಗೆ ದೂರು ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2022, 19:00 IST
Last Updated 29 ಏಪ್ರಿಲ್ 2022, 19:00 IST

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಬೈ–ಲಾ ತಿದ್ದುಪಡಿಗಳಿಗೆ ಕಾರ್ಯಕಾರಿ ಸಭೆಯ ಅನುಮೋದನೆ ಪಡೆದಿಲ್ಲ ಮತ್ತು ಕ್ರಮಬದ್ಧವಾಗಿಲ್ಲ ಎಂದು ಸಹಕಾರ ಸಂಘಗಳ ಉಪನಿಬಂಧಕರಿಗೆ ದೂರು
ಸಲ್ಲಿಸಲಾಗಿದೆ.

ಪರಿಷತ್ತಿನ ಸರ್ವ ಸದಸ್ಯರ ವಿಶೇಷ ಸಭೆ ಮತ್ತು ಮಹಾಸಭೆಯನ್ನು ಮೇ 1ರಂದು ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ಕರೆಯಲಾಗಿದೆ. ಆದರೆ, ಮಹಾಸಭೆ ಕರೆದಾಗ ವಿಶೇಷ ಸಭೆಯ ಅಗತ್ಯ ಏನು ಎಂದು ಪ್ರಶ್ನಿಸಿ ಪರಿಷತ್ತಿನ ಸದಸ್ಯರಾದ ಎಸ್‌.ಸಿ. ಜಯಶಂಕರಸ್ವಾಮಿ,ನ್‌. ಹನುಮೇಗೌಡ, ಎಲ್‌. ವಿಜಯಕುಮಾರ್‌, ವಿ. ಹರೀಶ್, ಕೆ. ರಾಜೇಶ್‌, ನಂಜುಂಡಸ್ವಾಮಿ ಅವರು ದೂರು ಸಲ್ಲಿಸಿದ್ದಾರೆ.

‘ವಿಶೇಷ ಸಭೆಗೆ ತಡೆಯಾಜ್ಞೆ ನೀಡಬೇಕು. ಇಲ್ಲದಿದ್ದರೆ ಪರಿಷತ್ತಿನ ಮತ್ತು ಸದಸ್ಯರ ಹಿತಾಸಕ್ತಿಗೆ ವಿರುದ್ಧವಾಗಿ ಬೈ–ಲಾ ತಿದ್ದುಪಡಿ ಮಾಡಿ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧ ವಾಗಿ ಅಧಿಕಾರ ಕೇಂದ್ರೀಕರಣಕ್ಕೆ ಅವಕಾಶ ದೊರೆಯುತ್ತದೆ. ಉದ್ದೇಶಿತ ತಿದ್ದುಪಡಿಯು ಜಿಲ್ಲಾಧ್ಯಕ್ಷರ ಅಧಿಕಾರವನ್ನು ಮೊಟಕುಗೊಳಿಸಿ ಪರಿಷತ್ತಿನ ಮೂಲಆಶಯಗಳನ್ನು ವಿಫಲಗೊಳಿಸುತ್ತದೆ’ ಎಂದು ಹನುಮೇಗೌಡ ಅವರು ದೂರಿದ್ದಾರೆ.

ADVERTISEMENT

‘ಬೈ–ಲಾ ತಿದ್ದುಪಡಿಗಳ ಬಗ್ಗೆ ನಿಯಮಗಳ ಅನುಸಾರ ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿಲ್ಲ. ಜತೆಗೆ, ಉದ್ದೇಶಿತ ತಿದ್ದುಪಡಿಯಲ್ಲಿ ಟ್ರಸ್ಟ್‌ ರಚಿಸಲು ಪ್ರಸ್ತಾಪಿಸಲಾಗಿದೆ. ಇದು ಕನ್ನಡ ಸಾಹಿತ್ಯ ಪರಿಷತ್ತಿಗೆ
ಪರ್ಯಾಯ ಸಂಸ್ಥೆಯನ್ನು ಹುಟ್ಟುಹಾಕುವ ಪ್ರಯತ್ನವಾಗಿದೆ’ ಎಂದು ಅವರು
ತಿಳಿಸಿದ್ದಾರೆ.

‘ತಿದ್ದುಪಡಿಗಳ ಮಾಹಿತಿಯನ್ನು ವೈಯಕ್ತಿಕವಾಗಿ ಸದಸ್ಯರಿಗೆ ಕಳುಹಿಸಿಲ್ಲ. ಈ ಮಾಹಿತಿಯನ್ನು ಸಹ
21 ದಿನಗಳ ಮುಂಚೆಯೇ ಕಳುಹಿಸಬೇಕಾಗಿತ್ತು. ಜತೆಗೆ, ಒಟ್ಟಾರೆಯಾಗಿ ಬೈ–ಲಾಗೆ ತಿದ್ದುಪಡಿ ಮಾಡಲಾಗುತ್ತಿದೆ. ಹಾಗಿದ್ದರೆ, ಇಲ್ಲಿಯವರೆಗೆ ಪರಿಷತ್ತಿಗಾಗಿ ಶ್ರಮಿಸಿದ ಮಹಾನ್‌ ವ್ಯಕ್ತಿಗಳಿಗೆ ಅಗೌರವ ಸಲ್ಲಿಸಿದಂತಾಗುವುದಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.