ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಬೈ–ಲಾ ತಿದ್ದುಪಡಿ ಹಾಗೂ ರಾಜ್ಯ ಘಟಕದ ಅಧ್ಯಕ್ಷರ ನಡೆ ಖಂಡಿಸಿ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಹಂ.ಗು. ರಾಜೇಶ್ ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆ ಪತ್ರವನ್ನು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಸಲ್ಲಿಸಿರುವ ಅವರು, ‘1915ರಿಂದ 2021ರ ಅವಧಿಯಲ್ಲಿ 6 ಬಾರಿ ಮಾತ್ರ ಕಸಾಪ ಬೈ–ಲಾ ತಿದ್ದುಪಡಿ ಮಾಡಲಾಗಿದೆ. ರಾಜ್ಯ ಘಟಕದ ಹಾಲಿ ಅಧ್ಯಕ್ಷರು ಕೇವಲ ಮೂರೂವರೆ ವರ್ಷದಲ್ಲಿ ಮೂರನೇ ಬಾರಿ ಬೈ–ಲಾ ತಿದ್ದುಪಡಿ ಮಾಡಲು ಹೊರಟಿರುವುದು ಅವರ ಸರ್ವಾಧಿಕಾರಿ ಮತ್ತು ಗೊಂದಲಕಾರಿ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ’ ಎಂದಿದ್ದಾರೆ.
‘ಮೂರನೇ ಬಾರಿಗೆ ಬೈ–ಲಾ ತಿದ್ದುಪಡಿಗೆ ಬಳ್ಳಾರಿಯ ಸಂಡೂರಿನಲ್ಲಿ ಕರೆದಿದ್ದ ಸರ್ವಸದಸ್ಯರ ಸಭೆಗೆ ರಾಜ್ಯವ್ಯಾಪಿ ಪ್ರಜ್ಞಾವಂತ ಕಸಾಪ ಸದಸ್ಯರು, ಸಾಹಿತಿಗಳು ತೀವ್ರವಾಗಿ ಪ್ರತಿಭಟಿಸಿದ ಕಾರಣ ಬೇಸಿಗೆಯ ನೆಪ ಹೇಳಿ ಜೂನ್ ತಿಂಗಳಿಗೆ ಮುಂದೂಡಲಾಗಿದೆ. ಬೆಂಗಳೂರು ನಗರ ಜಿಲ್ಲಾ ಕಸಾಪ ವತಿಯಿಂದ ನಡೆಸುವ ಕನ್ನಡ ಕಾರ್ಯಕ್ರಮಗಳಿಗೆ ಇನ್ನಿಲ್ಲದ ಅಡ್ಡಿ ಆತಂಕಗಳನ್ನು ಸೃಷ್ಟಿಸುವ ಮೂಲಕ ರಾಜ್ಯ ಘಟಕದ ಅಧ್ಯಕ್ಷರು ಕನ್ನಡಕ್ಕೆ ಕಂಠಕಪ್ರಾಯವಾಗಿದ್ದಾರೆ’ ಎಂದು ದೂರಿದ್ದಾರೆ.
‘ಸರ್ವಾಧಿಕಾರಿ, ಅನಾರೋಗ್ಯ ಮನಸ್ಥಿತಿಯ ಅಧ್ಯಕ್ಷರ ಅನುಮೋದನೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಯಾಗಿ ಮುಂದುವರೆಯುವುದು ವೈಯುಕ್ತಿಕವಾಗಿ ನನಗೆ ನಾಚಿಕೆಗೇಡಿನ ಮತ್ತು ಅವಮಾನಕಾರಿ ಸಂಗತಿಯೆನಿಸಿದೆ. ನೈತಿಕವಾಗಿ ನನ್ನ ಮನಸ್ಸು ಒಪ್ಪದ ಕಾರಣ ಕಸಾಪ ರಾಜ್ಯ ಘಟಕದ ಅಧ್ಯಕ್ಷರ ನಡೆ ಮತ್ತು ನಡವಳಿಕೆ ಎರಡನ್ನೂ ತೀವ್ರವಾಗಿ ಖಂಡಿಸಿ, ಸ್ವಾಭಿಮಾನದ ಮತ್ತು ಪ್ರತಿಭಟನೆಯ ಸೂಚಕವಾಗಿ ರಾಜೀನಾಮೆ ನೀಡುತ್ತಿದ್ದೇನೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.