ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನೀಡುವ ‘ಪ್ರೊ.ಸಿ.ಎಚ್. ಮರಿದೇವರು ಪ್ರತಿಷ್ಠಾನ ದತ್ತಿ ಪ್ರಶಸ್ತಿ’ಗೆ ಪ್ರಾಧ್ಯಾಪಕ ಬಿ.ವಿ.ವಸಂತ ಕುಮಾರ್ ಸೇರಿ ನಾಲ್ವರು ಆಯ್ಕೆಯಾಗಿದ್ದಾರೆ.
ಶಿಕ್ಷಣ ಕ್ಷೇತ್ರದಿಂದ ವಸಂತ ಕುಮಾರ್ ಅವರನ್ನು, ಸಾಹಿತ್ಯ ಕ್ಷೇತ್ರದಿಂದ ಮ.ನಂಜುಂಡ ಸ್ವಾಮಿ, ಸಂಸ್ಕೃತಿ ಮತ್ತು ಕಲಾ ಕ್ಷೇತ್ರದಿಂದ ಸುಧಾ ನರಸಿಂಹರಾಜು, ಕೃಷಿ ಮತ್ತು ನೀರಾವರಿ ಕ್ಷೇತ್ರದಿಂದ ಸಿದ್ಧಗಂಗಯ್ಯ ಹೊಲತಾಳು ಮತ್ತು ಕನ್ನಡ ಸೇವೆಗಾಗಿ ಚಿಕ್ಕನಾಯಕನ ಹಳ್ಳಿ ಕನ್ನಡ ಸಂಘವನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ.
ಪ್ರಶಸ್ತಿಯು ತಲಾ ₹15 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ. ತುಮಕೂರು ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾಗಿದ್ದ, ಲೇಖಕ ಹಾಗೂ ಶಿಕ್ಷಣ ತಜ್ಞ ಸಿ.ಎಚ್.ಮರಿದೇವರು ಅವರು ಈ ದತ್ತಿಯನ್ನು ಪರಿಷತ್ತಿನಲ್ಲಿ ಸ್ಥಾಪಿಸಿದ್ದಾರೆ. ಶಿಕ್ಷಣ, ಸಾಹಿತ್ಯ, ಕೃಷಿ, ನೀರಾವರಿ, ಕನ್ನಡ ಸೇವೆ ಹಾಗೂ ಸಂಗೀತ ಕ್ಷೇತ್ರದಲ್ಲಿ ಮೌಲಿಕ ಸೇವೆ ಸಲ್ಲಿಸಿದ ಐವರು ಸಾಧಕರಿಗೆ ಪುರಸ್ಕಾರ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.