ಬೆಂಗಳೂರು: ವಿಧಾನಸೌಧ ಮತ್ತು ವಿಕಾಸಸೌಧದ ಕಟ್ಟಡಗಳಿಗೆ ಕನ್ನಡತನ ಪ್ರತಿಬಿಂಬಿಸುವ ಘೋಷವಾಕ್ಯಗಳನ್ನು ಅಳವಡಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಯೋಜನೆ ರೂಪಿಸಿದ್ದು, ಸಾರ್ವಜನಿಕರಿಂದ ಘೋಷವಾಕ್ಯಗಳನ್ನು ಆಹ್ವಾನಿಸಿದೆ.
‘ಈ ಕಟ್ಟಡಗಳ ಭವ್ಯತೆಗೆ ಪೂರಕವಾಗಿ ಆಯ್ದ ಜಾಗಗಳಲ್ಲಿ ಕನ್ನಡದ ಘೋಷವಾಕ್ಯಗಳನ್ನು ಅಳವಡಿಸುವ ಮಹತ್ವದ ತೀರ್ಮಾನವನ್ನು ಸರ್ಕಾರವು ತೆಗೆದುಕೊಂಡಿದೆ. ಸಾರ್ವಜನಿಕರು ಕನ್ನಡ ಮತ್ತು ಕರ್ನಾಟಕದ ಕುರಿತಾದ ಘೋಷವಾಕ್ಯಗಳನ್ನು ಕಳುಹಿಸಬಹುದಾಗಿದೆ. ಸಾಹಿತ್ಯಿಕ ಘೋಷವಾಕ್ಯಗಳಲ್ಲದೆ, ಜನಪದದ ಸೂಕ್ತಿಗಳು, ಚಳವಳಿಗಳ ಘೋಷಣೆಗಳು, ಸಿನಿಮಾ ಗೀತೆಗಳನ್ನು ಸಹ ಅವಲೋಕಿಸಿ ಮೌಲ್ಯಯುತ ಸಲಹೆಗಳನ್ನು ನೀಡಬಹುದಾಗಿದೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
‘ಸಾರ್ವಜನಿಕರು ನೀಡುವ ಘೋಷವಾಕ್ಯಗಳು ಗದ್ಯ–ಪದ್ಯಗಳ ಎರಡು ನೆಲೆಗಳಲ್ಲಿರಬಹದು. ಅದನ್ನು ಓದಿದರೆ ಕನ್ನಡದ ಅಭಿಮಾನ ಜಾಗೃತವಾಗಬೇಕು. ಕನ್ನಡದ ಪ್ರಮುಖ ಉಪ ಸಂಸ್ಕೃತಿಗಳ ಒಳಗನ್ನು ತೆರೆದಿಡುವ ವಾಕ್ಯಗಳನ್ನು ಸಹ ನೀಡಬಹುದು. ಘೋಷವಾಕ್ಯಗಳು ಸಮಕಾಲೀನ ಭಾಷೆಯಲ್ಲಿರಬೇಕು. ನಿರಾಶಾದಾಯಕ ನುಡಿಗಳು, ವಿವಾದಾತ್ಮಕ ಹೇಳಿಕೆಗಳನ್ನು ಪರಿಗಣಿಸಲಾಗುವುದಿಲ್ಲ. ಗರಿಷ್ಠ ಎರಡು ಸಾಲುಗಳಲ್ಲಿ ಈ ಘೋಷವಾಕ್ಯಗಳು ಇರಬೇಕು. ರಚನೆಕಾರರ ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕು’ ಎಂದು ಹೇಳಿದ್ದಾರೆ.
ಇದೇ 30ರೊಳಗೆ ಪ್ರಾಧಿಕಾರದ ಇ ಮೇಲ್: chairman.kanpra@gmail.com ಗೆ ಘೋಷವಾಕ್ಯ ಕಳುಹಿಸಬೇಕು. ಸಂಪರ್ಕ ಸಂಖ್ಯೆ ಮತ್ತು ವಿಳಾಸ ಕಡ್ಡಾಯವಾಗಿ ನಮೂದಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.