
ಬೆಂಗಳೂರು: ‘ಕರ್ನಾಟಕ ಸಾರಿಗೆ ನಿಗಮ, ಮೈಸೂರು ಸ್ಯಾಂಡಲ್ ಸೋಪ್ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ಸಿಕ್ಕಿದೆ. ಇನ್ನುಳಿದ ಎಲ್ಲ ಸಂಸ್ಥೆಗಳಲ್ಲಿ ಕನ್ನಡಿಗೆ ಉದ್ಯೋಗ ಸಿಗಬೇಕು’ ಎಂದು ಚಿತ್ರ ನಿರ್ಮಾಪಕ ಸಾ.ರಾ. ಗೋವಿಂದು ಆಗ್ರಹಿಸಿದರು.
ಕೆಎಸ್‌ಆರ್‌ಟಿಸಿ ಕನ್ನಡ ಕ್ರಿಯಾ ಸಮಿತಿ ಶನಿವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ರಾಜ್ಯದಲ್ಲಿ ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ಎಂದು ಈ ಸರ್ಕಾರ ಆದೇಶ ಹೊರಡಿಸಿತು. ಪರಭಾಷಿಕರು ಎಷ್ಟು ಪ್ರಬಲರಾಗಿದ್ದಾರೆ ಎಂದರೆ ಬೆಳಿಗ್ಗೆ ಹೊರಡಿಸಿದ್ದ ಈ ಆದೇಶವನ್ನು ಸರ್ಕಾರ ಸಂಜೆ ವಾಪಸ್ ಪಡೆಯಿತು. ಪರಭಾಷಿಕರು ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ಕನ್ನಡ ಕ್ರಿಯಾ ಸಮಿತಿ ಗೌರವ ಅಧ್ಯಕ್ಷ ವ.ಚ. ಚನ್ನೇಗೌಡ ಮಾತನಾಡಿ, ‘ಕನ್ನಡ ಬಲ್ಲವರಿಗೆ ಉದ್ಯೋಗ ಕೊಡಬೇಕು ಎಂದು 33 ವರ್ಷಗಳ ಹಿಂದೆ 12 ದಿನ ಹಗಲು-ರಾತ್ರಿ ನಿರಂತರ ಹೋರಾಟ ಮಾಡಲಾಗಿತ್ತು. ಅದರ ಫಲದಿಂದ ಕೆಎಸ್‌ಆರ್‌ಟಿಸಿಯಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಲಭಿಸುವಂತಾಯಿತು’ ಎಂದರು.
ನಿವೃತ್ತ ಐಪಿಎಸ್ ಅಧಿಕಾರಿ, ಸಾಹಿತಿ ಡಿ.ವಿ. ಗುರುಪ್ರಸಾದ್, ಕನ್ನಡ ಪರಿಚಾರಕ ಎಚ್.ಎನ್. ರಮೇಶ್ ಬಾಬು, ಸಂಗೀತ ಗಮಕ ವಿದ್ವಾನ್ ಎಂ.ಖಾಸೀಮ್ ಮಲ್ಲಿಗೆಮಡುವು ಅವರನ್ನು ಸನ್ಮಾನಿಸಲಾಯಿತು.
ಕೆಎಸ್‌ಆರ್‌ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಜೆ.ಅಂತೋನಿ ಜಾರ್ಜ್, ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಎಸ್. ನಾಗರಾಜ್ ಮೂರ್ತಿ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಟಿ.ಎಸ್. ಲತಾ, ಕನ್ನಡ ಕ್ರಿಯಾ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಪ್ರಭುಸ್ವಾಮಿ, ಕಾರ್ಯಾಧ್ಯಕ್ಷ ಕೆ.ಎಸ್.ಎಂ. ಹುಸೇನ್, ಕೇಂದ್ರೀಯ ವಿಭಾಗ ಸಮಿತಿಯ ಅಧ್ಯಕ್ಷ ಆರ್.ಟಿ. ಶಾಂತರಾಜು, ಪ್ರಧಾನ ಕಾರ್ಯದರ್ಶಿ ಲಿಂಗರಾಜು, ಖಜಾಂಚಿ ರಮೇಶ್ ಡಿ.ಎಲ್. ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.