ಬೆಂಗಳೂರು: ‘ರಾಜ್ಯದ ಖಾಸಗಿ ಕಂಪನಿಗಳಲ್ಲಿ ಸಿ ಮತ್ತು ಡಿ ಗುಂಪಿನ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇಕಡ 100ರಷ್ಟು ಅವಕಾಶವಿದ್ದರೂ, ಹೊರಗುತ್ತಿಗೆ ನೇಮಕಾತಿಯ ಟೆಂಡರ್ ಪಡೆಯುವವರು ಅನ್ಯ ರಾಜ್ಯದವರಾದ್ದರಿಂದ ಕನ್ನಡಿಗರು ಅವಕಾಶ ವಂಚಿತರಾಗುತ್ತಿದ್ದಾರೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಕೊ ಕನ್ನಡ ಬಳಗ ಜಂಟಿಯಾಗಿ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೀದಿ ಬದಿ ವ್ಯಾಪಾರ ಕಾರ್ಮಿಕರ ಕಾರ್ಯಕರ್ತೆ ಬಸಮ್ಮ ಅವರಿಗೆ ‘ಸಮಾಜವಾದಿ ಧುರೀಣ ಶಾಂತವೇರಿ ಗೋಪಾಲಗೌಡ ಸ್ಮಾರಕ ಪ್ರಶಸ್ತಿ’ ಪ್ರದಾನ ಮಾಡಿ, ಮಾತನಾಡಿದರು.
‘ವಿವಿಧ ಖಾಸಗಿ ಕಂಪನಿಗಳ ಮಾನವ ಸಂಪನ್ಮೂಲ ವಿಭಾಗಗಳಲ್ಲಿ ಈ ಹಿಂದೆ ಕನ್ನಡಿಗರೇ ಹೆಚ್ಚಾಗಿ ಇರುತ್ತಿದ್ದರು. ಈಗ ಈ ವಿಭಾಗದಲ್ಲಿ ಅನ್ಯ ಭಾಷಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಸಿ ಮತ್ತು ಡಿ ಗುಂಪಿನ ಹುದ್ದೆಯಲ್ಲಿಯೂ ಕನ್ನಡಿಗರ ಸಂಖ್ಯೆ ಇಳಿಕೆಯಾಗುತ್ತಿದೆ. ಹೊರಗುತ್ತಿಗೆಯ ಟೆಂಡರ್ ಆಂಧ್ರಪ್ರದೇಶ ಸೇರಿ ವಿವಿಧ ರಾಜ್ಯದವರ ಪಾಲಾಗುತ್ತಿದೆ. ಇದರಿಂದಾಗಿ ಅವರು ತಮ್ಮ ರಾಜ್ಯದವರನ್ನು ನಿಯೋಜಿಸಿಕೊಳ್ಳುತ್ತಿದ್ದಾರೆ’ ಎಂದರು.
‘ಓದಿಗೆ ಅನುಗುಣವಾದ ಕೆಲಸ ಸಿಗದ ಈ ಸಂದರ್ಭದಲ್ಲಿ, ಯುವಜನರು ಕೆಲಸಕ್ಕೆ ಅಗತ್ಯವಾದ ಕೌಶಲ ಮತ್ತು ವೌಲ್ಯಗಳನ್ನು ಅಳವಡಿಸಿಕೊಳ್ಳುವತ್ತ ಗಮನಹರಿಸಬೇಕು. ರಾಜ್ಯದಲ್ಲಿ ವಿವಿಧ ಬಹುರಾಷ್ಟ್ರೀಯ ಕಂಪನಿಗಳು ಹೂಡಿಕೆಗೆ ಒಲವು ತೋರುತ್ತಿವೆ. ಹೀಗಾಗಿ, ನಮ್ಮ ಮಕ್ಕಳು ಇಂದಿನ ಕಾಲಘಟ್ಟಕ್ಕೆ ತಕ್ಕುದಾದ ಕೌಶಲಗಳನ್ನು ಪಡೆಯಲು ಅನುಕೂಲವಾಗುವಂತೆ ಶಿಕ್ಷಣ ಸಂಸ್ಥೆಗಳು ವ್ಯವಸ್ಥೆ ಮಾಡಬೇಕು’ ಎಂದು ಹೇಳಿದರು.
ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಪ್ರಕಾಶಮೂರ್ತಿ, ‘ಬೆಂಗಳೂರಿನಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಕನ್ನಡ ಉಳಿದರೆ ಇಡೀ ಕರ್ನಾಟಕದಲ್ಲಿ ಕನ್ನಡ ಉಳಿಯುತ್ತದೆ. ಉದ್ಯೋಗ, ಶಿಕ್ಷಣ ಸಂಬಂಧ ಇಲ್ಲಿಗೆ ಬರುವ ಅನ್ಯ ಭಾಷಿಕರು ಇಲ್ಲಿನ ಸಂಸ್ಕೃತಿಗೆ ಒಗ್ಗಿಕೊಂಡು, ಕನ್ನಡ ಕಲಿಯಬೇಕು’ ಎಂದು ಹೇಳಿದರು.
ನಗರದ ಶಾಂತವೇರಿ ಗೋಪಾಲಗೌಡ ವೃತ್ತದ ಬಳಿ ಶಾಂತವೇರಿ ಗೋಪಾಲಗೌಡರ ಪ್ರತಿಮೆ ನಿರ್ಮಿಸುವಂತೆ ಸರ್ಕಾರಕ್ಕೆ ಮೈಕೊ ಕನ್ನಡ ಬಳಗದ ಪದಾಧಿಕಾರಿಗಳು ಆಗ್ರಹಿಸಿದರು.
ಮೈಕೊ ಕನ್ನಡ ಬಳಗದ ಅಧ್ಯಕ್ಷ ಕೆ.ಎಸ್.ರಾಮತೀರ್ಥ, ಬಾಷ್ ಬಿಡದಿ ಮಾನವ ಸಂಪನ್ಮೂಲ ವಿಭಾಗದ ಎಸ್.ಶ್ರೀನಾಥ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.