ಪ್ರಜಾವಾಣಿ ವಾರ್ತೆ
ಕೆ.ಆರ್.ಪುರ: ಮೂರು ತಿಂಗಳಿಂದ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಕರೆಯದ ಕಣ್ಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ವಜಾಗೊಳಿಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಡಾ.ಎಸ್.ಜೆ.ಮಧು ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ
‘ಅಧ್ಯಕ್ಷ ಅಶೋಕ್ ಹಾಗೂ ಉಪಾಧ್ಯಕ್ಷೆ ಲಲಿತಾ ಅವರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿ ಜವಾಬ್ದಾರಿ ಮರೆತಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವ ವಿಚಾರವಾಗಿ ಸಭೆಯಲ್ಲಿ ಚರ್ಚಿಸಿ ಅನುಷ್ಠಾನಕ್ಕೆ ತರಲು ಪ್ರತಿ ತಿಂಗಳಿಗೊಮ್ಮೆ ಪಂಚಾಯಿತಿ ಸದಸ್ಯರೊನ್ನಗೊಳ್ಳಗೊಂಡ ಕಾರ್ಯಕಲಾಪಗಳನ್ನು ನಡೆಸಲು ಸಭೆ ಕರೆಯಬೇಕು. ಆದರೆ, ಸಭೆ ಕರೆಯದ ಕಾರಣ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಉಂಟಾಗಿದೆ’ ಎಂದು ಅವರು ದೂರಿದ್ದಾರೆ.
2024ನೇ ಸಾಲಿನಲ್ಲಿ ಫೆಬ್ರವರಿಯಿಂದ ಜೂನ್ ವರೆಗೆ ಹಾಗೂ 2025ನೇ ಸಾಲಿನಲ್ಲಿ ಜೂನ್ ನಿಂದ ಇಲ್ಲಿಯವರೆಗೆ ಸಭೆ ಕರೆದಿಲ್ಲ. ಇಬ್ಬರನ್ನು ಅವರ ಸ್ಥಾನದಿಂದ ವಜಾಗೊಳಿಸಿ, ಗ್ರಾಮ ಸ್ವರಾಜ್ ಅಧಿನಿಯಮ 43ಎ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
‘ಹಣ ದುರುಪಯೋಗ ಹಾಗೂ ಅಧಿಕಾರ ದುರ್ಬಳಕೆ ವಿಚಾರದಲ್ಲಿ ನ್ಯಾಯಾಲಯ ಯಾವುದೇ ಹಣಕಾಸು ವಹಿವಾಟು ನಡೆಸದಂತೆ ಮಧ್ಯಂತರ ಆದೇಶ ನೀಡಿದೆ. ಆದರೂ ಅಶೋಕ್ ಅವರು ಆದೇಶ ಉಲ್ಲಂಘಿಸಿ ಲಕ್ಷಾಂತರ ರೂಪಾಯಿ ಚೆಕ್ ಗಳಿಗೆ ಸಹಿ ಮಾಡಿ ನಿರಂತರವಾಗಿ ವಿತರಣೆ ಮಾಡುತ್ತಿದ್ದಾರೆ’ ಎಂದು ಮಧು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.