ಬೆಂಗಳೂರು: ‘ವಿಶ್ವ ವಿಖ್ಯಾತ ಕರಗ ಉತ್ಸವವು ಸಾಂಪ್ರದಾಯಿಕ ಮಾರ್ಗದಲ್ಲೇ ಸಾಗಲಿದೆ. ಪ್ರತಿಬಾರಿಯಂತೆ ಕಾಟನ್‌ಪೇಟೆಯಲ್ಲಿರುವತವಕ್ಕಲ್ ಮಸ್ತಾನ್ ದರ್ಗಾಕ್ಕೂ ಭೇಟಿ ನೀಡಲಿದೆ’ ಎಂದು ಕರಗ ಆಯೋಜಕರು ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಬೆಂಗಳೂರು ಕರಗ ಸಮಿತಿ, ಹಜ್ರತ್ ತವಕ್ಕಲ್ ಮಸ್ತಾನ್ ದರ್ಗಾ ಸಮಿತಿ, ನಗರ ಜಿಲ್ಲಾಡಳಿತ, ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆಯವರು ಶುಕ್ರವಾರ ಜಂಟಿ ಸುದ್ದಿಗೋಷ್ಠಿ ನಡೆಸಿದರು.
‘ಕರಗವು ದರ್ಗಾಕ್ಕೆ ಭೇಟಿ ನೀಡುವುದು 300 ವರ್ಷಗಳಿಂದ ನಡೆದು ಬಂದಿರುವ ಸಂಪ್ರದಾಯ. ಅದು ಕೋಮು ಸಾಮರಸ್ಯದ ಸಂಕೇತ’ ಎಂದು ಆಯೋಜಕರು ತಿಳಿಸಿದರು.
‘ಪ್ರತಿ ವರ್ಷವೂ ಮೊಹರಂ ದಿನ ಮುಸ್ಲಿಂ ಬಾಂಧವರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಕರಗ ಶಕ್ತ್ಯೋತ್ಸವದ ವೇಳೆ ನಮ್ಮವರು ದರ್ಗಾಕ್ಕೆ ಹೋಗುತ್ತಾರೆ. ಇದು ವಾಡಿಕೆ.ಕರಗವು ದರ್ಗಾಗೆ ಭೇಟಿ ನೀಡಲು ಅವಕಾಶ ನೀಡುವುದಿಲ್ಲ ಎಂದು ಯಾರೋ ಹೇಳಿದ್ದಾರೆ. ಹಾಗೆಂದು ಪರಂಪರಾಗತವಾಗಿ ಆಚರಿಸುತ್ತ ಬಂದ ಪದ್ಧತಿ ಬದಲಿಸಲು ಸಾಧ್ಯವಿಲ್ಲ’ ಎಂದುವಿಧಾನಪರಿಷತ್ ಸದಸ್ಯ ಪಿ.ಆರ್.ರಮೇಶ್ ಹೇಳಿದರು.
ಚಿಕ್ಕಪೇಟೆ ಶಾಸಕ ಉದಯ ಗರುಡಾಚಾರ್, ‘ವಿಶ್ವ ಪ್ರಸಿದ್ಧವಾಗಿರುವ ಕರಗ ಮಹೋತ್ಸವದಲ್ಲಿ ಎಲ್ಲಾ ಸಮುದಾಯದವರು ಪಾಲ್ಗೊಳ್ಳಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಕೆಲಸಕ್ಕೆ ಯಾರೂ ಮುಂದಾಗಬಾರದು’ ಎಂದರು.
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ‘ಕರಗ ಆಚರಣೆಗಾಗಿ ಧರ್ಮರಾಯಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಬಿಬಿಎಂಪಿಯಿಂದ ₹50 ಲಕ್ಷ ಅನುದಾನ ಬಿಡುಗಡೆ ಮಾಡಿದ್ದೇವೆ. ಕರಗ ಸಾಗುವ ಹಾದಿಯ ಎಲ್ಲಾ ರಸ್ತೆ, ಪಾದಚಾರಿ ಮಾರ್ಗ, ಬೀದಿ ದೀಪಗಳ ದುರಸ್ತಿ ಮಾಡಲಾಗುತ್ತಿದೆ. ಆರೋಗ್ಯ ಸಿಬ್ಬಂದಿ ನಿಯೋಜನೆ ಹಾಗೂ ಶೌಚಾಲಯ ನಿರ್ಮಾಣಕ್ಕೂ ಒತ್ತು ನೀಡಲಾಗಿದೆ’ ಎಂದು ತಿಳಿಸಿದರು.
ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್, ‘ಮಾರ್ಚ್ 22 ರಂದು ವ್ಯವಸ್ಥಾಪನಾ ಸಮಿತಿ ರಚಿಸಲಾಗಿದೆ. ಸಮಿತಿಯು ಈಗಾಗಲೇ ಹಲವು ಸಭೆಗಳನ್ನು ನಡೆಸಿದೆ. ಎಲ್ಲರಿಗೂ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ’ ಎಂದು ಹೇಳಿದರು.
‘ಅಹಿತಕರ ಘಟನೆ ತಡೆಯಲು ಕ್ರಮ’
‘ಈ ಬಾರಿಯ ಕರಗ ಮಹೋತ್ಸವದಲ್ಲಿ ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ತಿಳಿಸಿದರು.
‘ಕರಗ ಶಕ್ತ್ಯೋತ್ಸವದಂದು ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗುತ್ತದೆ. 38 ಅಧಿಕಾರಿಗಳು, 400ಕ್ಕೂ ಅಧಿಕ ಸಿಬ್ಬಂದಿ, ಕೆಎಸ್‌ಆರ್‌ಪಿ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗುತ್ತದೆ. ಜನಜಂಗುಳಿಯ ಮೇಲೆ ನಿಗಾ ಇಡಲು ಎಲ್ಲಾ ರಸ್ತೆಗಳಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಮಾಹಿತಿ ನೀಡಿದರು.
‘ಮುಸ್ಲಿಂ ಬಾಂಧವರ ಆಹ್ವಾನದ ಮೇರೆಗೆ ಕರಗವು ದರ್ಗಾಗೆ ಭೇಟಿ ನೀಡುವುದು ಪರಂಪರೆಯಿಂದ ನಡೆದು ಬಂದಿದೆ. ಇದಕ್ಕೆ ಅಡ್ಡಿಪಡಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.