ADVERTISEMENT

ವಿಧಾನಸಭಾ ಕಲಾಪ: ಸಚಿವರನ್ನು ಕೆರಳಿಸಿದ ‘ವೈರಸ್’ ಟೀಕೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 9:06 IST
Last Updated 19 ಫೆಬ್ರುವರಿ 2020, 9:06 IST
   

ಬೆಂಗಳೂರು: ‘ಅನರ್ಹ ಶಾಸಕರು ಬಿಜೆಪಿಗೆ ಅಂಟಿದ ವೈರಸ್ ಎಂದು ಸ್ವತಃ ಬಿ.ಎಲ್.ಸಂತೋಷ್ ಹೇಳಿದ್ದಾರೆ’ ಎಂಬ ಪಿ.ಆರ್.ರಮೇಶ್ ಅವರ ಮಾತು ವಿಧಾನ ಪರಿಷತ್‌ನಲ್ಲಿ ಇಬ್ಬರು ಸಚಿವರನ್ನು ಕೆರಳುವಂತೆ ಮಾಡಿತು.

ಮಂಗಳೂರು ಗಲಭೆ, ಅದರಿಂದ ಆಡಳಿತ ಕುಸಿದಿದೆ ಎಂಬ ವಿಷಯದ ಮೇಲೆ ಬುಧವಾರ ಮುಂದುವರಿದ ಚರ್ಚೆಯ ವೇಳೆ ಆರ್.ಬಿ.ತಿಮ್ಮಾಪುರ ಅವರು ಮಾತನಾಡುತ್ತಿದ್ದ ವೇಳೆ ಈ ಪ್ರಸಂಗ ನಡೆಯಿತು.

ಸರ್ಕಾರದ ಆಡಳಿತ ವ್ಯವಸ್ಥೆ ಕುಸಿದಿದೆ ಎಂದು ತಿಮ್ಮಾಪುರ ಹೇಳುತ್ತಿದ್ದಂತೆ ಮಧ್ಯ ಪ್ರವೇಶಿಸಿದ ರಮೇಶ್, ಅನರ್ಹರು ವೈರಸ್ ಎಂಬುದಾಗಿ ಸಂತೋಷ್ ಹೇಳಿದ್ದನ್ನು ಉಲ್ಲೇಖಿಸಿದರು.

ADVERTISEMENT

ಸದನದಲ್ಲಿದ್ದ ಸಚಿವರಾದ ಎಸ್.ಟಿ.ಸೋಮಶೇಖರ್ ಮತ್ತು ಬಿ.ಸಿ.ಪಾಟೀಲ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸುಪ್ರೀಂ ಕೋರ್ಟ್ ತೀರ್ಪಿನಂತೆ ತಾವು ಮತ್ತೆ ಜನರಿಂದ ಆಯ್ಕೆಯಾಗಿ ಬಂದವರು ಎಂದರು.

ಕಾಂಗ್ರೆಸ್‌ನ ಯೋಗ್ಯತೆಗೆ ಕೆಪಿಸಿಸಿ ಅಧ್ಯಕ್ಷರನ್ನು ಆಯ್ಕೆ ಮಾಡುವುದೇ ಸಾಧ್ಯವಾಗಿಲ್ಲ ಎಂದರು.ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರೂ ಸಚಿವರನ್ನು ಸಮರ್ಥಿಸಿದರು. ಕೊನೆಗೆ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ಸಚಿವರನ್ನು ಸಮಾಧಾನಪಡಿಸಿ ಚರ್ಚೆ ಮುಂದುವರಿಯಲು ಅವಕಾಶ ಮಾಡಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.