ADVERTISEMENT

‘ಕರೀಂಖಾನ್ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿ’: ಜಾಣಗೆರೆ ವೆಂಕಟರಾಮಯ್ಯ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 15:16 IST
Last Updated 29 ಜುಲೈ 2025, 15:16 IST
ಕಾರ್ಯಕ್ರಮದಲ್ಲಿ ಜಾಣಗೆರೆ ವೆಂಕಟರಾಮಯ್ಯ ಅವರನ್ನು ಸನ್ಮಾನಿಸಲಾಯಿತು. ಮನು ಬಳಿಗಾರ್, ರಾ.ನಂ.ಚಂದ್ರಶೇಖರ,  ವ.ಚ.ಚನ್ನೇಗೌಡ ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಜಾಣಗೆರೆ ವೆಂಕಟರಾಮಯ್ಯ ಅವರನ್ನು ಸನ್ಮಾನಿಸಲಾಯಿತು. ಮನು ಬಳಿಗಾರ್, ರಾ.ನಂ.ಚಂದ್ರಶೇಖರ,  ವ.ಚ.ಚನ್ನೇಗೌಡ ಉಪಸ್ಥಿತರಿದ್ದರು   

ಬೆಂಗಳೂರು: ‘ಜಾನಪದ ಕಲೆ, ಸಾಹಿತ್ಯದ ಉಳಿವಿಗಾಗಿ ಶ್ರಮಿಸಿದ ಜಾನಪದ ತಜ್ಞ ಎಸ್.ಕೆ. ಕರೀಂಖಾನ್ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಬೇಕು’ ಎಂದು ಕನ್ನಡ‍ ಪರ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. 

ಕನ್ನಡ ಗೆಳೆಯರ ಬಳಗ ಮತ್ತು ಕರ್ನಾಟಕ ವಿಕಾಸ ರಂಗ ಜಂಟಿಯಾಗಿ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಕನ್ನಡ ಬಾವುಟ ಹಾರಿಸಿದವರು ನೆನಪಿನ ಮಾಲೆ’ ಸರಣಿ ಕಾರ್ಯಕ್ರಮದಲ್ಲಿ ಕರೀಂಖಾನ್ ಅವರ ಬಗ್ಗೆ ಉಪನ್ಯಾಸ ನೀಡಿದರು.

‘ಎಲ್ಲ ಸಾಹಿತ್ಯಕ್ಕೆ ಮೂಲ ಬೇರು ಜಾನಪದ ಸಾಹಿತ್ಯ. ಜಾನಪದ ಸಾಹಿತ್ಯ ಮತ್ತು ಕಲೆಗೆ ಕರೀಂಖಾನ್ ಗೌರವ ತಂದುಕೊಟ್ಟಿದ್ದಾರೆ. ಸಾಗರ ತಾಲ್ಲೂಕಿನಲ್ಲಿ 5 ಸಾವಿರ ಅಡಿ ಎತ್ತರದಲ್ಲಿರುವ ಮೇಘಾನೆ ಎಂಬ ಗ್ರಾಮದಲ್ಲಿ ಕ್ಷೇತ್ರ ಕಾರ್ಯ ಮಾಡಿ, ಅಲ್ಲಿನ ಸಂಸ್ಕೃತಿಯ ಬಗ್ಗೆ ಚಿತ್ರೀಕರಣ ಮಾಡಿದ್ದಾರೆ. ಅವರು ಈ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಜಾನಪದ ಕಲೆಯನ್ನು ರಕ್ಷಣೆ ಮಾಡಿರುವ ಅವರ ಹೆಸರಿನಲ್ಲಿ ಸರ್ಕಾರವು ಪ್ರಶಸ್ತಿ ಸ್ಥಾಪಿಸಿ, ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಶ್ರಮಿಸಿದವರಿಗೆ ಆ ಪ್ರಶಸ್ತಿ ನೀಡಬೇಕು. ಈ ಬಗ್ಗೆ ಸರ್ಕಾರಕ್ಕೆ ಆಗ್ರಹಿಸಲು ಸಾಹಿತಿಗಳ ನಿಯೋಗವನ್ನು ಮುಖ್ಯಮಂತ್ರಿ ಅವರ ಬಳಿ ಕರೆದೊಯ್ಯಬೇಕು’ ಎಂದರು. 

ADVERTISEMENT

ಕನ್ನಡ ಗೆಳಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ, ‘ಅಪಾರ ಪ್ರತಿಭೆ ಹೊಂದಿದ್ದ ಕರೀಂಖಾನ್ ಅವರಿಗೆ ಸೂಕ್ತ ಗೌರವ, ಸ್ಥಾನಮಾನಗಳು ಸಿಗಲಿಲ್ಲ. ಅಜ್ಞಾತ ಕವಿಗಳ ಹಾಡುಗಳು ನಾಶವಾಗಬಾರದೆಂದು ಅವುಗಳನ್ನು ಸಂಗ್ರಹಿಸಿ, ಪ್ರಕಟಿಸಿದ್ದಾರೆ’ ಎಂದು ಹೇಳಿದರು. 

ಕರ್ನಾಟಕ ವಿಕಾಸರಂಗದ ಅಧ್ಯಕ್ಷ ವ.ಚ.ಚನ್ನೇಗೌಡ, ‘ಉರ್ದು ಮನೆ ಮಾತಾಗಿದ್ದರೂ ಕನ್ನಡ ಮತ್ತು ಸಂಸ್ಕೃತವನ್ನು ಕರೀಂಖಾನ್ ಅವರು ಅಧ್ಯಯನ ಮಾಡಿದ್ದರು. ಹೆಚ್ಚು ವಿದ್ಯಾಭ್ಯಾಸ ಮಾಡದಿದ್ದರೂ, ಜಾನಪದ ಪ್ರಕಾರ, ಭಗವದ್ಗೀತೆ, ಭಾಗವತ, ಶಿವಪುರಾಣಗಳ ಚಾರಿತ್ರಿಕ ಸಂಗತಿಗಳನ್ನು ನಿಂತಲ್ಲಿಯೇ ಹೇಳುವಷ್ಟು ಪ್ರತಿಭಾವಂತರಾಗಿದ್ದರು’ ಎಂದು ಸ್ಮರಿಸಿಕೊಂಡರು. 

ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್ ಹಾಗೂ ಕರೀಂಖಾನ್ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.