ADVERTISEMENT

ಬೆಂಗಳೂರು: ನಗರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ

ಗೋವಿಂದರಾಜ ನಗರ, ಬಸವನಗುಡಿ ಮತ್ತು ಪದ್ಮನಾಭನಗರ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 20:44 IST
Last Updated 6 ಮಾರ್ಚ್ 2023, 20:44 IST
ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ವತಿಯಿಂದ ಏರ್ಪಡಿ ಸಿದ್ದ ವಿಜಯಸಂಕಲ್ಪ ಯಾತ್ರೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡಿದ್ದರು. ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವ ಆರ್. ಅಶೋಕ, ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿ ಸುಬ್ರಹ್ಮಣ್ಯ, ಎಂ. ಕೃಷ್ಣಪ್ಪ ಇದ್ದರು.
ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ವತಿಯಿಂದ ಏರ್ಪಡಿ ಸಿದ್ದ ವಿಜಯಸಂಕಲ್ಪ ಯಾತ್ರೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡಿದ್ದರು. ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವ ಆರ್. ಅಶೋಕ, ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿ ಸುಬ್ರಹ್ಮಣ್ಯ, ಎಂ. ಕೃಷ್ಣಪ್ಪ ಇದ್ದರು.   

ಬೆಂಗಳೂರು: ರಾಜ್ಯದಲ್ಲಿ ಪಕ್ಷದ ಪರ ಅಲೆ ಎಬ್ಬಿಸಲು ಹೊರಟಿರುವ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಸೋಮವಾರ ನಗರದ ಗೋವಿಂದರಾಜ ನಗರ, ಬಸವನಗುಡಿ ಮತ್ತು ಪದ್ಮನಾಭನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ, ಮತದಾರರನ್ನು ಮನ ಸೆಳೆಯುವ ಯತ್ನ ನಡೆಸಿತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್‌, ಕೇಂದ್ರ ಸಚಿವ ಭೂಪೇಂದ್ರ ಯಾದವ್‌, ಶೋಭಾ ಕರಂದ್ಲಾಜೆ, ಕಂದಾಯ ಸಚಿವ ಆರ್‌.ಅಶೋಕ, ವಸತಿ ಸಚಿವ ವಿ.ಸೋಮಣ್ಣ, ಸಂಸದ ತೇಜಸ್ವಿ ಸೂರ್ಯ ಮುಂತಾದವರು ಭಾಗವಹಿಸಿದ್ದರು.

ಯಾತ್ರೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ರಾಜ್ಯದಲ್ಲಿ ಬಿಜೆಪಿಯ ಪರ ಸುನಾಮಿ ಎದ್ದಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಬಹುಮತದಿಂದ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಹೇಳಿದರು.

ADVERTISEMENT

‘ಕಾಂಗ್ರೆಸ್‌ ಪಕ್ಷದವರು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ ರಾಜ್ಯದ ಜನರು ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಮತ್ತು ರಾಜ್ಯದಲ್ಲಿ ನಮ್ಮ ಸರ್ಕಾರ ಮಾಡಿರುವ ಕೆಲಸ ಹಾಗೂ ಜನಪರ ಯೋಜನೆಗಳನ್ನು ಗಮನಿಸಿದ್ದಾರೆ. ಇದರಿಂದಾಗಿ ವಿಜಯಸಂಕಲ್ಪ ಯಾತ್ರೆ ಹೋದ ಕಡೆಗಳಲ್ಲಿ ಭಾರಿ ಜನಬೆಂಬಲ ವ್ಯಕ್ತವಾಗುತ್ತಿದೆ. ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಪಕ್ಷದ ಕೇಂದ್ರದ ನಾಯಕರು ಬಂದಾಗ ಬಿಜೆಪಿ ಪರ ಅಲೆ ಹೆಚ್ಚಾಗುತ್ತಲೇ ಹೋಗುತ್ತಿದೆ’ ಎಂದರು.

ಮನೆ–ಮನೆಗೆ ಹೋಗಿ ಕೇಂದ್ರ, ರಾಜ್ಯ ಸರ್ಕಾರಗಳ ಜನಪರ ಕೆಲಸದ ಮಾಹಿತಿ ನೀಡಬೇಕು. ಜನಮನ ಗೆದ್ದು ಪಕ್ಷ ಗೆಲ್ಲುವಂತೆ ನೋಡಿಕೊಳ್ಳುವಂತೆ ಕಾರ್ಯಕರ್ತರಿಗೆ ಸೂಚಿಸಿದರು.

ಸೋಮಣ್ಣ ಎಲ್ಲೂ ಹೋಗಲ್ಲ: ಸಿ.ಎಂ
‘ಸಚಿವ ವಿ.ಸೋಮಣ್ಣ ಎಲ್ಲೂ ಹೋಗಲ್ಲ. ನಮ್ಮ ಜತೆಯೇ ಇರುತ್ತಾರೆ’ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.

ಗೋವಿಂದರಾಜ ನಗರದಲ್ಲಿ ವಿಜಯಸಂಕಲ್ಪ ಯಾತ್ರೆ ವೇಳೆ ಕಂದಾಯ ಸಚಿವ ಅಶೋಕ ಅವರು ಸ್ವಲ್ಪ ದೂರ ಸಾಗಿದ ಬಳಿಕ ತಮಗೆ ಬೇರೆ ಕೆಲಸ ಇದೆ ಹೋಗುತ್ತೇನೆ ಎಂದು ಅಲ್ಲಿಂದ ತೆರಳಿದರು. ಇದರಿಂದ ಮುನಿಸಿಕೊಂಡ ವಿ.ಸೋಮಣ್ಣ ಅವರು ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಯಾತ್ರೆಯನ್ನು ಅರ್ಧಕ್ಕೇ ಬಿಟ್ಟು ಹೋಗಿದ್ದರು. ಬಳಿಕ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸೋಮಣ್ಣ ಜತೆ ಮಾತನಾಡಿ ಮುನಿಸನ್ನು ತಣಿಸಿದರು ಎಂದು ಮೂಲಗಳು ಹೇಳಿವೆ.

ಕಂದಾಯ ಸಚಿವ ಅಶೋಕ ಅವರು ರಾತ್ರಿ ಸುದ್ದಿಗಾರರ ಜತೆ ಮಾತನಾಡಿ, ಸೋಮಣ್ಣ ಅವರು ಹಳೇ ಮೈಸೂರು ಮಾತ್ರವಲ್ಲ ಉತ್ತರ ಕರ್ನಾಟಕ ಭಾಗದ ಪ್ರಭಾವಿ ನಾಯಕ. ಅವರು ನಮ್ಮ ಪಕ್ಷದ ಶಕ್ತಿ. ಅಮಿತ್‌ ಶಾ ಅವರೇ ಸೋಮಣ್ಣ ಅವರ ಮನೆಗೆ ಹೋಗಿದ್ದರು. ಸಣ್ಣ ಪುಟ್ಟ ವಿಚಾರಗಳಿದ್ದರೆ ಪಕ್ಷದ ಒಳಗೇ ತೀರ್ಮಾನಿಸಿಕೊಳ್ಳುತ್ತೇವೆ. ಅವರು ಪಕ್ಷವನ್ನು ಬಿಟ್ಟು ಹೋಗುವುದಿಲ್ಲ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.