ADVERTISEMENT

ಉಪಚುನಾವಣೆ: ಪೊಲೀಸರಿಂದ ಬಿಗಿ ಭದ್ರತೆ

ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚುವರಿ ಸಿಬ್ಬಂದಿ: ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಕಠಿಣ ಕ್ರಮ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 18:30 IST
Last Updated 2 ಡಿಸೆಂಬರ್ 2019, 18:30 IST
ಭಾಸ್ಕರ್ ರಾವ್
ಭಾಸ್ಕರ್ ರಾವ್   

ಬೆಂಗಳೂರು: ನಗರ ಕಮಿಷನರೇಟ್ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಇದೇ 5ರಂದು ಉಪ ಚುನಾವಣೆ ನಡೆಯಲಿದ್ದು, ಈ ಕ್ಷೇತ್ರಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲು ಪೊಲೀಸರು ಸಿದ್ಧರಾಗಿದ್ದಾರೆ.

ಭದ್ರತೆ ಬಗ್ಗೆ ಮಾಹಿತಿ ನೀಡಲು ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ‘ಕೆ.ಆರ್.ಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್ ಹಾಗೂ ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಅಲ್ಲಿಯ ಭದ್ರತೆ ಜವಾಬ್ದಾರಿಯನ್ನು ಆಯಾ ಡಿಸಿಪಿಗಳಿಗೆ ವಹಿಸಲಾಗಿದ್ದು, ಹೆಚ್ಚುವರಿ ಪೊಲೀಸ್ ಕಮಿಷನರ್‌ಗಳು ಉಸ್ತುವಾರಿ ನೋಡಿಕೊಳ್ಳಲಿದ್ದಾರೆ’ ಎಂದರು.

‘1064 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಅದರಲ್ಲಿ 826 ಸಾಮಾನ್ಯ ಹಾಗೂ 238 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಸಾಮಾನ್ಯ ಮತಗಟ್ಟೆಗಳಲ್ಲಿ ತಲಾ ಒಬ್ಬ ಕಾನ್‌ಸ್ಟೆಬಲ್‌ ನಿಯೋಜಿಸಲಾಗುತ್ತಿದೆ. ಸೂಕ್ಷ್ಮ ಮತಗಟ್ಟೆಗಳಲ್ಲಿ ಇಬ್ಬರು ಕಾನ್‌ಸ್ಟೆಬಲ್, ಹೆಡ್‌ ಕಾನ್‌ಸ್ಟೆಬಲ್‌ ಹಾಗೂ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತಿದೆ’ ಎಂದು ಭಾಸ್ಕರ್‌ ರಾವ್ ಹೇಳಿದರು.

ADVERTISEMENT

’ಚುನಾವಣೆ ಭದ್ರತೆಗಾಗಿ 2,896 ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್),ರಾಜ್ಯ ಸಶಸ್ತ್ರ ಮೀಸಲು ಪಡೆ (ಕೆಎಸ್‌ಆರ್‌ಪಿ), ನಗರಸಶಸ್ತ್ರ ಪಡೆ (ಸಿಎಆರ್‌),ರ‍್ಯಾಪಿಡ್ ದಳದ ಸಿಬ್ಬಂದಿಯನ್ನೂ ಭದ್ರತೆಗೆ ಬಳಸಿಕೊಳ್ಳಲಾಗುತ್ತಿದೆ’ ಎಂದರು.

ನಿಷೇಧಾಜ್ಞೆ ಜಾರಿ: ‘ಚುನಾವಣೆ ನಡೆಯುವ ಕ್ಷೇತ್ರ ವ್ಯಾಪ್ತಿಯಲ್ಲಿ ಡಿ. 3ರಿಂದ ಡಿ. 6ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅದರ ಜೊತೆಗೆ ಮದ್ಯ ಮಾರಾಟವನ್ನೂ ನಿಷೇಧಿಸಲಾಗಿದೆ’ ಎಂದು ಭಾಸ್ಕರ್ ರಾವ್ ಹೇಳಿದರು.

‘ದಂಡ ‍‍ಪ್ರಕ್ರಿಯಾ ಸಂಹಿತೆ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ಈ ಅವಧಿಯಲ್ಲಿ ಯಾರಾದರೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

₹ 15.92 ಲಕ್ಷ ಜಪ್ತಿ: ‘ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹ 15.92 ಲಕ್ಷವನ್ನು ಜಪ್ತಿ ಮಾಡಲಾಗಿದೆ. ಹಣ ತೆಗೆದುಕೊಂಡು ಹೋಗುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಭಾಸ್ಕರ್ ರಾವ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.