ಬೆಂಗಳೂರು: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ಜಾತಿಯ ಕಾಲಂನಲ್ಲಿ ಯಾವುದೆ ಕಾರಣಕ್ಕೂ ಉಪಜಾತಿಯ ವಿವರವನ್ನು ನಮೂದಿಸಬಾರದು. ಒಂದು ವೇಳೆ ಹಾಗೆ ಬರೆಸಿದರೆ ಈ ಹಿಂದಿನ ಸಮೀಕ್ಷೆಯ ವರದಿಯಂತೆ ಸಮುದಾಯದ ಜನಸಂಖ್ಯೆಯ ಬಗ್ಗೆ ಸ್ಪಷ್ಟತೆ ದೊರೆಯುವುದಿಲ್ಲ’ ಎಂದು ಕರ್ನಾಟಕ ರಾಜ್ಯ ಪ್ರವರ್ಗ–1ರ ಜಾತಿಗಳ ಒಕ್ಕೂಟದ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್ ತಿಳಿಸಿದರು.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗೊಲ್ಲ ಜಾತಿಯಲ್ಲಿ ಅನೇಕ ಉಪಜಾತಿಗಳನ್ನು ನಮೂದಿಸಲಾಗಿರುತ್ತದೆ. ಆದರೆ, ಮುಖ್ಯವಾದ ಜಾತಿ ಯಾವುದೆಂದು ಮನಗಂಡು, ಗೊಲ್ಲ ಎಂಬ ಜಾತಿಯನ್ನು ಮಾತ್ರ ಬರೆಯಿಸಬೇಕಿದೆ. ಯಾದವ, ಹಣಬರು, ಕಾಡುಗೊಲ್ಲ ಇತ್ಯಾದಿ ಉಪಜಾತಿಗಳನ್ನು ಜಾತಿ ಕಾಲಂನಲ್ಲಿ ನಮೂದಿಸಿದಾಗ ನಮ್ಮ ಜಾತಿಯ ಸಂಖ್ಯೆ ಕಡಿಮೆಯಾಗಿ, ಮೀಸಲಾತಿ ಪ್ರಮಾಣ ಕಡಿಮೆಯಾಗುತ್ತದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮುಂದೆ ಬರಲು ಸಾಧ್ಯವಾಗುವುದಿಲ್ಲ’ ಎಂದರು.
‘ಒಕ್ಕೂಟದ ಅಡಿಯಲ್ಲಿ ಬರುವ ಎಲ್ಲ ಜಾತಿಗಳು ಕುಟುಂಬದ ವಿವರವನ್ನು ಒದಗಿಸಬೇಕು. ಜಾತಿಯ ಕಾಲಂನಲ್ಲಿ ಮೂಲ ಜಾತಿಯನ್ನು ಮಾತ್ರ ನಮೂದಿಸಬೇಕು. ಉಪಜಾತಿಯ ಮಾಹಿತಿ ಇದ್ದಲ್ಲಿ ಬೇರೆ ಕಡೆ ನಮೂದಿಸಬೇಕು’ ಎಂದು ಹೇಳಿದರು.
‘ಪ್ರವರ್ಗ 1ರ ಒಕ್ಕೂಟದ ಅಡಿ 97 ಜಾತಿಗಳು ಹಾಗೂ 376 ಉಪಜಾತಿಗಳು ಸೇರಿ ಸುಮಾರು 75 ಲಕ್ಷಕ್ಕೂ ಅಧಿಕ ಜನಸಂಖ್ಯೆಯಿದೆ. ಅಲೆಮಾರಿ ಜನಾಂಗಗಳಾದ ಗೊಲ್ಲ, ಕಾಡುಗೊಲ್ಲ, ದೊಂಬಿದಾಸರು, ಜೋಗಿಗಳು ಸೇರಿ 46 ಜಾತಿಗಳ ಜನರ ಜೀವನ ಹೀನಾಯ ಸ್ಥಿತಿಗೆ ತಲುಪಿದೆ. ಆದ್ದರಿಂದ ಪ್ರವರ್ಗ 1ರಡಿ ಬರುವ ಜಾತಿಗಳಿಗೆ ಮೀಸಲಾತಿ ಹೆಚ್ಚಿಸಿ, ವಿವಿಧ ಸರ್ಕಾರಿ ಸೌಲಭ್ಯಗಳನ್ನು ಒದಗಿಸಬೇಕು’ ಎಂದು ಆಗ್ರಹಿಸಿದರು.
‘ಹಿಂದೂ ಮರಾಠವೆಂದು ನಮೂದಿಸಿ’: ಎಂ.ಜಿ.ಮುಳೆ
‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಮರಾಠರು ಧರ್ಮದ ಕಾಲಂನಲ್ಲಿ ‘ಹಿಂದೂ’ ವೆಂದು ಜಾತಿಯ ಕಾಲಂನಲ್ಲಿ ‘ಮರಾಠ’ರೆಂದು ನಮೂದಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎಂ.ಜಿ.ಮುಳೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಮನೆ ಮನೆಗೆ ಬರುವ ಗಣತಿದಾರರಿಗೆ ಸಮರ್ಪಕ ಮಾಹಿತಿ ಒದಗಿಸಬೇಕು. ಉಪಜಾತಿ ಕಾಲಂನಲ್ಲಿ ಕುಣಬಿ ಮಾತೃಭಾಷೆ ಕಾಲಂನಲ್ಲಿ ಮರಾಠಿ ಎಂದು ನಮೂದಿಸಬೇಕು. ರಾಜ್ಯದಲ್ಲಿ ಮರಾಠ ಸಮುದಾಯದ ಜನಸಂಖ್ಯೆ 40 ಲಕ್ಷಕ್ಕಿಂತ ಅಧಿಕವಿದೆ. ಆದರೆ ಸರ್ಕಾರವು 16 ಲಕ್ಷವೆಂದು ಈ ಹಿಂದೆ ತೋರಿಸಿದೆ. ಸಮುದಾಯದ ಜನಸಂಖ್ಯೆ ಸರ್ಕಾರಕ್ಕೆ ನಿಖರವಾಗಿ ತಿಳಿಯಲು ಪ್ರತಿಯೊಬ್ಬರೂ ಹಿಂದುಳಿದ ವರ್ಗಗಳ ಆಯೋಗ ನಡೆಸಲಿರುವ ಈ ಸಮೀಕ್ಷೆಯಲ್ಲಿ ಭಾಗವಹಿಸಬೇಕು’ ಎಂದು ಹೇಳಿದರು. ಮರಾಠ ಮುಖಂಡರಾದ ಸುರೇಶ್ ರಾವ್ ಸಾಟಿ ಎಸ್.ಆರ್.ಸಿಂಧೆ ಟಿ.ಆರ್.ಸುನಿಲ್ ಚೌಹಾಣ್ ವೆಂಕಟರಾವ್ ಉಪಸ್ಥಿತರಿದ್ದರು.
‘ವಹ್ನಿಕುಲ ಕ್ಷತ್ರಿಯರೆಂದು ಬರೆಸಿ’: ವಹ್ನಿಕುಲ ಕ್ಷತ್ರಿಯರ ಸಂಘ ಮನವಿ
‘ಸಮೀಕ್ಷೆ ವೇಳೆ ಜಾತಿ ಕಾಲಂನಲ್ಲಿ ವನ್ನಿಕುಲ ಅಥವಾ ವಹ್ನಿಕುಲ ಕ್ಷತ್ರಿಯರೆಂದು ನಮೂದಿಸಬೇಕು’ ಎಂದು ಕರ್ನಾಟಕ ರಾಜ್ಯ ತಿಗಳರ (ವಹ್ನಿಕುಲ ಕ್ಷತ್ರಿಯರ) ಸಂಘ ಮನವಿ ಮಾಡಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮು. ಕೃಷ್ಣಮೂರ್ತಿ ‘ಸಮೀಕ್ಷೆಯ ಕ್ರಮ ಸಂಖ್ಯೆ 1332ರ ಅಡಿ ವನ್ನಿಕುಲ ಅಥವಾ ವಹ್ನಿಕುಲ ಕ್ಷತ್ರಿಯ ಎಂದೇ ಬರೆಯಿಸಬೇಕು. ಉಪಜಾತಿಗಳನ್ನು ಬೇರೆ ಕಾಲಂನಲ್ಲಿ ಉಲ್ಲೇಖಿಸಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.