ADVERTISEMENT

2.5 ಲಕ್ಷಕ್ಕೂ ಅಧಿಕ ಹುದ್ದೆ ಖಾಲಿ, ಹಂತಹಂತವಾಗಿ ಭರ್ತಿಗೆ ಕ್ರಮ: ಸಿ.ಎಂ.

ಹಂತಹಂತವಾಗಿ ಭರ್ತಿಗೆ ಕ್ರಮ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 15:58 IST
Last Updated 21 ಫೆಬ್ರುವರಿ 2026, 15:58 IST
ವಿವಿಧ ಅರೆ ವೈದ್ಯಕೀಯ ಹುದ್ದೆಗಳಿಗೆ ಆಯ್ಕೆಯಾದವರಿಗೆ ನೇಮಕಾತಿ ಆದೇಶ ಪತ್ರ ನೀಡುವ ಕಾರ್ಯಕ್ರಮದಲ್ಲಿ ತಾವು ಪಡೆದ ಪತ್ರ ಪ್ರದರ್ಶಿಸಿದ ನೌಕರರು. ಹರ್ಷ ಗುಪ್ತ, ದಿನೇಶ್ ಗುಂಡೂರಾವ್, ನಸೀರ್ ಅಹಮದ್, ರಿಜ್ವಾನ್ ಅರ್ಷದ್ ಉಪಸ್ಥಿತರಿದ್ದರು. 
ಪ್ರಜಾವಾಣಿ ಚಿತ್ರ.
ವಿವಿಧ ಅರೆ ವೈದ್ಯಕೀಯ ಹುದ್ದೆಗಳಿಗೆ ಆಯ್ಕೆಯಾದವರಿಗೆ ನೇಮಕಾತಿ ಆದೇಶ ಪತ್ರ ನೀಡುವ ಕಾರ್ಯಕ್ರಮದಲ್ಲಿ ತಾವು ಪಡೆದ ಪತ್ರ ಪ್ರದರ್ಶಿಸಿದ ನೌಕರರು. ಹರ್ಷ ಗುಪ್ತ, ದಿನೇಶ್ ಗುಂಡೂರಾವ್, ನಸೀರ್ ಅಹಮದ್, ರಿಜ್ವಾನ್ ಅರ್ಷದ್ ಉಪಸ್ಥಿತರಿದ್ದರು.  ಪ್ರಜಾವಾಣಿ ಚಿತ್ರ.   

ಬೆಂಗಳೂರು: ರಾಜ್ಯದ ವಿವಿಧ ಇಲಾಖೆಗಳಲ್ಲಿ 2.5 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿದ್ದು, ಹಂತ ಹಂತವಾಗಿ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಆರೋಗ್ಯ ಇಲಾಖೆ ಶನಿವಾರ ಆಯೋಜಿಸಿದ್ದ ‘ಅಭಯ ಹಸ್ತ’ ಆರೋಗ್ಯ ಮತ್ತು ವಿವಿಧ ಅರೆ ವೈದ್ಯಕೀಯ ಹುದ್ದೆಗಳಿಗೆ ಆಯ್ಕೆಯಾದವರಿಗೆ ನೇಮಕಾತಿ ಆದೇಶ ಹಸ್ತಾಂತರಿಸಿ ಮಾತನಾಡಿ, ನೇಮಕಾತಿಯಲ್ಲಿದ್ದ ಹಲವು ಸಮಸ್ಯೆಗಳನ್ನು ಬಗೆಹರಿಸಿ, ಹಂತ ಹಂತವಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದರು.

ಸಮಾಜದ ಸ್ವಾಸ್ಥ್ಯ ಕಾಪಾಡುವ ಶಿಕ್ಷಣ, ಆರೋಗ್ಯ, ಪೊಲೀಸ್ ವ್ಯವಸ್ಥೆ ಅತ್ಯಂತ ಅವಶ್ಯವಾಗಿದೆ. ವೈದ್ಯೇತರ ಸಿಬ್ಬಂದಿ ವೈದ್ಯರಷ್ಟೇ ಪ್ರಮುಖರು. ಆರೋಗ್ಯ ಕ್ಷೇತ್ರದ ಕೆಲಸ ಕಾರ್ಯಗಳಲ್ಲಿ ಜಾತಿ, ಧರ್ಮಗಳ ಬೇಧಗಳನ್ನು ಮೀರಿ, ಮಾನವೀಯತೆಯಿಂದ ಸೇವೆ ಸಲ್ಲಿಸುವುದು ಮುಖ್ಯ ಎಂದು ಸಲಹೆ ನೀಡಿದರು.

ADVERTISEMENT

ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೇಮಕಾತಿಗೆ ಪ್ರತ್ಯೇಕ 'ನೇಮಕಾತಿ ಮಂಡಳಿ' ರಚಿಸಲು ಯೋಜಿಸಿದ್ದು, ಈ ಸಂಬಂಧ ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗಿದೆ. ನೌಕರರು ನಿವೃತ್ತರಾದ ತಕ್ಷಣ ನೇಮಕಾತಿ ಪ್ರಕ್ರಿಯೆ ನಡೆದರೆ, ಮಾನವ ಸಂಪನ್ಮೂಲದ ಕೊರತೆ ಉಂಟಾಗುವುದಿಲ್ಲ’ ಎಂದರು.

‘ಪುನೀತ್ ರಾಜಕುಮಾರ್ ಹೃದಯ ಯೋಜನೆ ಅಡಿ 13,000 ಜನರಿಗೆ ಚಿಕಿತ್ಸೆ ನೀಡಿ, ಪ್ರಾಣ ಉಳಿಸಲಾಗಿದೆ. ₹ 20 ಸಾವಿರ ಮೌಲ್ಯದ ಹೃದಯ ಸಂಬಂಧಿ ಇಂಜೆಕ್ಷನ್ ಉಚಿತವಾಗಿ ನೀಡಲಾಗುವುದು. ತಾಯಿ ಮರಣ ಪ್ರಮಾಣ ಇಳಿಕೆಯಾಗಿದ್ದು, ಭ್ರೂಣ ಹತ್ಯೆ ತಡೆಗೆ ಕಟ್ಟುನಿಟ್ಟಿನ ಕ್ರಮ ಜಾರಿ ಮಾಡಲಾಗಿದೆ’ ಎಂದರು.

ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ, ಮುಖ್ಯಮಂತ್ರಿ ರಾಜಕೀಯ ಸಲಹೆಗಾರ ನಸೀರ್ ಅಹಮದ್, ಶಾಸಕ ರಿಜ್ವಾನ್ ಅರ್ಷದ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.