ಬೆಂಗಳೂರು: ಉತ್ತರ ಕರ್ನಾಟಕದ ವಿವಿಧೆಡೆ ಉಂಟಾಗಿರುವ ಪ್ರವಾಹ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ನೀಡುವ ಪರಿಹಾರದ ಎರಡು ಪಟ್ಟು ಮೊತ್ತವನ್ನು ರಾಜ್ಯ ಸರ್ಕಾರ ನೀಡಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಪ್ರವಾಹ ಆದಾಗ 63 ಹೊಸ ಗ್ರಾಮಗಳನ್ನೇ ಕಟ್ಟಿಸಿದ್ದರು. ಎರಡನೇ ಬಾರಿ ಪ್ರವಾಹ ಉಂಟಾದಾಗ ಸುಮಾರು ಮೂರು ಲಕ್ಷ ಮನೆಗಳನ್ನು ಮತ್ತು ₹5 ಲಕ್ಷದಂತೆ ಪರಿಹಾರವನ್ನು ನೀಡಿದ್ದೆವು. ನಾನು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ಸರ್ಕಾರ ನೀಡುವ ಪರಿಹಾರದ ಎರಡುಪಟ್ಟು ನೀಡಿದ್ದೆವು. ಪ್ರತಿ ಎಕರೆಗೆ ಒಣ ಬೇಸಾಯಕ್ಕೆ ₹ 13 ಸಾವಿರ, ನೀರಾವರಿಗೆ ₹ 18 ಸಾವಿರ, ತೋಟಗಾರಿಕೆ ಬೆಳೆಗಳಿಗೆ ₹ 25 ಸಾವಿರ ಪರಿಹಾರ ನೀಡಲಾಗಿತ್ತು. ಏಳು ಲಕ್ಷ ರೈತರು ಈ ಪರಿಹಾರ ಪಡೆದಿದ್ದರು. ಇದೇ ಮಾದರಿಯನ್ನು ಈಗಿನ ಸರ್ಕಾರ ಅನುಸರಿಸಲಿ’ ಎಂದು ಒತ್ತಾಯಿಸಿದರು.
ಬಿಗ್‌ಬಾಸ್ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ‘ಎಷ್ಟು ದಿನದಿಂದ ಸಮಸ್ಯೆ ಇದೆ? ಈಗ್ಯಾಕೆ ಈ ಕ್ರಮ ಕೈಗೊಂಡಿದ್ದಾರೆ ಎನ್ನುವ ಪ್ರಶ್ನೆ ಮೂಡಿದೆ. ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಅನುಮತಿ ಕೊಡಿಸುವ ಮೂಲಕ ಡಿ.ಕೆ. ಶಿವಕುಮಾರ್ ಇದರಲ್ಲಿ ತಮ್ಮ ಪಾತ್ರ ಇಲ್ಲ ಎನ್ನುವುದನ್ನು ಸಾಬೀತುಪಡಿಸುವ ಪ್ರಯತ್ನ ಮಾಡಿದ್ದಾರೆ’ ಎಂದು ಹೇಳಿದರು.
‘ನವೆಂಬರ್‌ನಲ್ಲಿ ಏನಾಗುತ್ತದೆ ಎಂಬುದು ಕಾಂಗ್ರೆಸ್‌ನ ಆಂತರಿಕ ವಿಚಾರ. ಕಾಂಗ್ರೆಸ್‌ನ ಶಾಸಕರು, ಸಚಿವರ ನಡುವೆ ಗೊಂದಲ ಇದೆ. ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಅವರು ಮುಂದುವರಿಯುವುದಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಕ್ರಾಂತಿ ನವೆಂಬರ್‌ನಲ್ಲಿ ಆಗುತ್ತದಾ? ಡಿಸೆಂಬರ್‌ನಲ್ಲಿ ಆಗುತ್ತದಾ ಎಂಬುದನ್ನು ಕಾದು ನೋಡಬೇಕು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.