ADVERTISEMENT

ಪಿಎಐ: ಕರ್ನಾಟಕಕ್ಕೆ ಈ ಸಲವೂ 4ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 21 ಜುಲೈ 2018, 19:52 IST
Last Updated 21 ಜುಲೈ 2018, 19:52 IST
‘ಸಾರ್ವಜನಿಕ ಆಡಳಿತ ಸೂಚ್ಯಂಕ 2018’ರ ವರದಿಯನ್ನು ಶನಿವಾರ ಬಿಡುಗಡೆ ಮಾಡಿದ ಡಾ.ಕೆ. ಕಸ್ತೂರಿ ರಂಗನ್ ಅದರ ಪ್ರತಿಯನ್ನು ಸಂಸ್ಥೆಯ ನಿರ್ದೇಶಕ ಜಿ.ಗುರುಚರಣ್ ಅವರಿಗೆ ನೀಡಿದರು. ಕೆನಡಾದ ಕಾನ್ಸುಲ್ ಜನರಲ್ ಜೆನ್ನಿಫರ್ ಡೌಬೆನಿ ಮತ್ತು ಪ್ರೊ.ಅರುಣ್ ಪೂಜಾರಿ ಇದ್ದಾರೆ –ಪ್ರಜಾವಾಣಿ ಚಿತ್ರ
‘ಸಾರ್ವಜನಿಕ ಆಡಳಿತ ಸೂಚ್ಯಂಕ 2018’ರ ವರದಿಯನ್ನು ಶನಿವಾರ ಬಿಡುಗಡೆ ಮಾಡಿದ ಡಾ.ಕೆ. ಕಸ್ತೂರಿ ರಂಗನ್ ಅದರ ಪ್ರತಿಯನ್ನು ಸಂಸ್ಥೆಯ ನಿರ್ದೇಶಕ ಜಿ.ಗುರುಚರಣ್ ಅವರಿಗೆ ನೀಡಿದರು. ಕೆನಡಾದ ಕಾನ್ಸುಲ್ ಜನರಲ್ ಜೆನ್ನಿಫರ್ ಡೌಬೆನಿ ಮತ್ತು ಪ್ರೊ.ಅರುಣ್ ಪೂಜಾರಿ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ದೊಡ್ಡ ರಾಜ್ಯಗಳ ಸಾರ್ವಜನಿಕ ಆಡಳಿತ ಸೂಚ್ಯಂಕದಲ್ಲಿ (ಪಿಎಐ) ಕರ್ನಾಟಕ ಈ ಸಾಲಿನಲ್ಲೂ ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದೆ. ಕೇರಳ ಈ ಬಾರಿಯೂ ಮೊದಲ ಸ್ಥಾನ ಪಡೆಯುವ ಮೂಲಕ ಹ್ಯಾಟ್ರಿಕ್‌ ಸಾಧನೆ ಮಾಡಿದೆ.

ಸಣ್ಣ ರಾಜ್ಯಗಳ ಪೈಕಿ ಹಿಮಾಚಲ ಪ್ರದೇಶವು ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ವಿವಿಧ ರಾಜ್ಯಗಳ ಆಡಳಿತ ವ್ಯವಸ್ಥೆಗಳನ್ನು ಅಧ್ಯಯನ ಮಾಡುವ ಪಬ್ಲಿಕ್‌ ಅಫೇರ್ಸ್‌ ಸೆಂಟರ್‌ (ಪಿಎಸಿ) ಪ್ರತಿ ವರ್ಷವೂ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ.

ಸಾಮಾಜಿಕ ರಕ್ಷಣೆ ಒದಗಿಸುವ ವಿಚಾರದಲ್ಲಿ 2016ರಲ್ಲಿ ಅಗ್ರಸ್ಥಾನದಲ್ಲಿದ್ದ ಕರ್ನಾಟಕ ಈ ಬಾರಿ 16ನೇ ಸ್ಥಾನಕ್ಕೆ ಕುಸಿದಿದೆ. ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಹೆಚ್ಚಿಸುವಲ್ಲಿ ಹಾಗೂ ಪರಿಸರ ಸಂರಕ್ಷಣೆ ವಿಚಾರದಲ್ಲಿ 2016 ಹಾಗೂ 2017ರಲ್ಲಿ ಎರಡನೇ ಸ್ಥಾನದಲ್ಲಿದ್ದ ಕರ್ನಾಟಕವು ಈ ಬಾರಿ ಅಗ್ರಸ್ಥಾನಕ್ಕೇರಿದೆ. ಇದು ಶ್ರೇಯಾಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಕಾಯ್ದುಕೊಳ್ಳಲು ನೆರವಾಗಿದೆ.

ADVERTISEMENT

ಹಣಕಾಸು ನಿರ್ವಹಣೆ, ಆರ್ಥಿಕ ಸ್ವಾತಂತ್ರ್ಯ ವಿಚಾರಗಳಲ್ಲೂ ರಾಜ್ಯದ ಆಡಳಿತ ವ್ಯವಸ್ಥೆ ಸುಧಾರಣೆ ಕಂಡಿದೆ. ಮೂಲಸೌಕರ್ಯ ಅಭಿವೃದ್ಧಿ ರಾಜ್ಯವು ನಿರಂತರ ಬೆಳವಣಿಗೆ ಸಾಧಿಸಿದೆ. ವಿದ್ಯುತ್‌, ಕುಡಿಯುವ ನೀರು, ರಸ್ತೆಗಳ ನಿರ್ವಹಣೆ, ಸಂವಹನ ಹಾಗೂ ವಸತಿ ಕಲ್ಪಿಸಿರುವುದನ್ನು ಮಾನದಂಡವನ್ನಾಗಿಸಿ ಮೂಲಸೌಕರ್ಯ ಅಭಿವೃದ್ಧಿ ಪ್ರಮಾಣವನ್ನು ಅಳೆಯಲಾಗುತ್ತದೆ.

ಆಡಳಿತಕ್ಕೆ ಸಂಬಂಧಿಸಿದ 10 ವಿಚಾರಗಳನ್ನು ಹಾಗೂ 30 ಆದ್ಯತಾ ವಿಷಯಗಳನ್ನು ಆಧರಿಸಿ ಪಿಎಸಿ ಅಧ್ಯಯನ ನಡೆಸುತ್ತದೆ.
**
2030ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ. ಜತೆಗೆ ಪರಿಸರದ ಮೇಲಿನ ಹಾನಿಯ ಪ್ರಮಾಣವೂ ಹೆಚ್ಚಲಿದೆ. ಇವುಗಳ ನಡುವೆ ಸಮತೋಲನ ಸಾಧಿಸುವ ಸವಾಲು ನಮ್ಮ ಮುಂದಿದೆ
–ಡಾ.ಕೆ.ಕಸ್ತೂರಿ ರಂಗನ್‌, ಪಿಎಸಿ ಅಧ್ಯಕ್ಷ
**
ದತ್ತಾಂಶವನ್ನು ಕಲೆಹಾಕಿದರೆ ಸಾಲದು. ಅದು ಸದ್ಬಳಕೆ ಆಗಬೇಕು. ದತ್ತಾಂಶವನ್ನು ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ಆಗದಂತೆ ಸಾಮಾಜಿಕ ಒಳಿತಿಗೆ ಬಳಸುವ ಬದ್ಧತೆ ಇಂದಿನ ಅಗತ್ಯ
– ಪ್ರೊ.ಅರುಣ್‌ ಪೂಜಾರಿ, ರಾಜಸ್ಥಾನ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ
**
ಮಕ್ಕಳ ಸ್ಥಿತಿಗತಿ: ರಾಜ್ಯಕ್ಕೆ 8ನೇ ಸ್ಥಾನ
ಪಿಎಸಿಯು ಈ ಬಾರಿ ‘ಭಾರತದಲ್ಲಿ ಮಕ್ಕಳ ಸ್ಥಿತಿಗತಿ’ ಕುರಿತು ಅಧ್ಯಯನ ನಡೆಸಿದೆ. ಬಾಲ್ಯದ ಬೆಳವಣಿಗೆ, ಶಿಕ್ಷಣ, ಹದಿಹರೆಯ, ಅವರ ರಕ್ಷಣೆ ಹಾಗೂ ಅವರಿಗೆ ಸಂಬಂಧಿಸಿದ ಸಾಂಸ್ಥಿಕ ರಚನೆಗಳು ಮತ್ತು ಆಡಳಿತ ವ್ಯವಸ್ಥೆಯನ್ನು ಆಧರಿಸಿ ಈ ಅಧ್ಯಯನ ಕೈಗೊಳ್ಳಲಾಗಿದೆ. ಇದರಲ್ಲಿ ಕರ್ನಾಟಕಕ್ಕೆ ಎಂಟನೇ ಸ್ಥಾನ ಲಭಿಸಿದ್ದು, ಕೇರಳ ಅಗ್ರಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.