ಬೆಂಗಳೂರು: ‘ಸಂಚಾರದಟ್ಟಣೆ ನಿಯಂತ್ರಿಸಲು ನಗರದ 18 ಕಡೆ ಒಟ್ಟು 100 ಕಿಲೋ ಮೀಟರ್ ಉದ್ದದ ಸಿಗ್ನಲ್ ಮುಕ್ತ ಕಾರಿಡಾರ್ (ಮೇಲ್ಸೆತುವೆ) ನಿರ್ಮಿಸಲು ಉದ್ದೇಶಿಸಲಾಗಿದೆ’ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶನಿವಾರ ತಿಳಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬೆಂಗಳೂರು ನಗರದ ಶಾಸಕರ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು, ‘ಈ ಯೋಜನೆಗೆ ಸುಮಾರು ₹ 12 ಸಾವಿರ ಕೋಟಿ ವೆಚ್ಚವಾಗಬಹುದು. ಸಂಚಾರದಟ್ಟಣೆ ಸಾಂದ್ರತೆಯ ಆಧಾರದಲ್ಲಿ ಬಿಬಿಎಂಪಿ ಈ ಸ್ಥಳಗಳನ್ನು ಗುರುತಿಸಿದೆ. ಟೆಂಡರ್ ಕರೆಯಲು ಸಿದ್ಧತೆ ಮಾಡಲಾಗುತ್ತಿದೆ’ ಎಂದು ವಿವರಿಸಿದರು.
‘ರಾಗಿಗುಡ್ಡದ ಬಳಿ ಈಗಾಗಲೇ ಡಬಲ್ ಡೆಕರ್ ಮೇಲ್ಸೆತುವೆ ನಿರ್ಮಿಸಿದ್ದು, ಅಲ್ಲಿ ಒಂದು ಭಾಗದ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಕೆಲವೆಡೆ ಕೆಳಸೇತುವೆ ನಿರ್ಮಿಸಲು ಸಚಿವರಾದ ರಾಮಲಿಂಗಾರೆಡ್ಡಿ ಸೇರಿದಂತೆ ಕೆಲವು ಶಾಸಕರು ಸಲಹೆ ನೀಡಿದ್ದಾರೆ. ಆ ಬಗ್ಗೆ ಪ್ರಸ್ತಾವ ನೀಡುವಂತೆ ಸೂಚಿಸಿದ್ದೇನೆ’ ಎಂದರು.
ನೈಸ್ ರಸ್ತೆ ಬಳಿ ಸ್ಕೈಡೆಕ್: ‘ನೈಸ್ ರಸ್ತೆಯ ಬಳಿ 250 ಮೀಟರ್ ಎತ್ತರದ ಸ್ಕೈಡೆಕ್ ನಿರ್ಮಿಸಲು ನಿರ್ಧರಿಸಿದ್ದು, ಸರ್ಕಾರಿ– ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ಬದಲು ಸರ್ಕಾರದ ವೆಚ್ಚದಲ್ಲಿಯೇ ಯೋಜನೆ ಅನುಷ್ಠಾನಗೊಳಿಸಲಾಗುವುದು. ಇದಕ್ಕೆ ₹ 500 ಕೋಟಿ ವೆಚ್ಚ ಅಂದಾಜಿಸಿದೆ. ಎಲ್ಲ ಶಾಸಕರು ಒಪ್ಪಿಗೆ ಸೂಚಿಸಿದ್ದು, ಸಂಪುಟ ಸಭೆಗೆ ಪ್ರಸ್ತಾವವನ್ನು ಮಂಡಿಸಲಾಗುವುದು’ ಎಂದರು.
‘ಸ್ಕೈಡೆಕ್‌ಗೆ 25 ಎಕರೆ ಜಾಗ ಅಗತ್ಯವಿದೆ. ವಾಯುಸೇನೆ, ವಿಮಾನಯಾನ ಸಚಿವಾಲಯದವರು ಅವರ 20 ಕಿ.ಮೀ ವ್ಯಾಪ್ತಿಯಲ್ಲಿ ಈ ಯೋಜನೆಗೆ ಅವಕಾಶವಿಲ್ಲ ಎಂದಿದ್ದಾರೆ. ನೈಸ್ ಸಂಸ್ಥೆಯ ಬಳಿ ಜಾಗವಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸರ್ಕಾರಕ್ಕೆ ನೈಸ್ ಸಂಸ್ಥೆಯು 200 ಎಕರೆ ಭೂಮಿ ವಾಪಸ್ ನೀಡಬೇಕಿದೆ. ನೈಸ್ ಸಂಸ್ಥೆ ಜೊತೆ ಚರ್ಚೆ ಮಾಡುತ್ತೇವೆ’ ಎಂದು ತಿಳಿಸಿದರು.
‘ಕೆಂಗೇರಿಯಿಂದ ಎಲೆಕ್ಟ್ರಾನಿಕ್ ಸಿಟಿವರೆಗೂ ಮೆಟ್ರೊ ಸಂಪರ್ಕ ಮಾಡಬೇಕಿದೆ. ಇದರಿಂದ ಆರ್ಥಿಕವಾಗಿ ಹೊರೆ ಆಗಲಿದೆ. ಈ ಭಾಗ ಅಭಿವೃದ್ಧಿ ಆಗದೇ ಇರುವ ಕಾರಣ ಭೂಸ್ವಾಧೀನಕ್ಕೆ ಕಡಿಮೆ ವೆಚ್ಚವಾಗಲಿದೆ ಎಂಬ ಸಲಹೆಯನ್ನು ಕೆಲವರು ನೀಡಿದ್ದಾರೆ. ಆರ್ಥಿಕವಾಗಿ ನಮಗೆ ಎಲ್ಲಿ ಅನುಕೂಲ ಆಗುತ್ತದೆಯೊ ಅಲ್ಲಿ ಭೂಸ್ವಾಧೀನಕ್ಕೆ ಪರಿಶೀಲಿಸಲಾಗುವುದು’ ಎಂದರು.
ಆಗಸ್ಟ್ 20ರ ವೇಳೆಗೆ ಚಾಲನೆ: ‘110 ಹಳ್ಳಿಗಳಿಗೆ ಕಾವೇರಿ 5ನೇ ಹಂತದ ನೀರು ಪೂರೈಕೆ ಯೋಜನೆಗೆ ಆಗಸ್ಟ್ 20ರ ವೇಳೆಗೆ ಚಾಲನೆ ನೀಡಲಾಗುವುದು’ ಎಂದೂ ಅವರು ತಿಳಿಸಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಸಚಿವರಾದ ಜಮೀರ್ ಅಹಮದ್ ಖಾನ್, ದಿನೇಶ್ ಗುಂಡೂರಾವ್, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್, ಶಾಸಕರಾದ ಸಿ.ಎನ್. ಅಶ್ವತ್ಥನಾರಾಯಣ, ಕೆ. ಗೋಪಾಲಯ್ಯ, ಎಸ್.ಟಿ. ಸೋಮಶೇಖರ್, ಎಂ. ಕೃಷ್ಣಪ್ಪ, ಎಸ್.ಆರ್. ವಿಶ್ವನಾಥ್, ಎಲ್.ಎ. ರವಿ ಸುಬ್ರಹ್ಮಣ್ಯ, ಮುನಿರಾಜು, ಮುನಿರತ್ನ, ಸಿ.ಕೆ. ರಾಮಮೂರ್ತಿ, ಮಂಜುಳಾ ಲಿಂಬಾವಳಿ, ಎ.ಸಿ. ಶ್ರೀನಿವಾಸ್, ಸತೀಶ್ ರೆಡ್ಡಿ, ಆನೇಕಲ್ ಶಿವಣ್ಣ, ಬೈರತಿ ಬಸವರಾಜ್, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಟಿ.ಎ. ಶರವಣ, ಸುಧಾಮ ದಾಸ್ ಸಭೆಯಲ್ಲಿ ಭಾಗಿಯಾಗಿದ್ದರು.
ಎಸ್ಟೀಮ್ ಮಾಲ್–ಸಿಲ್ಕ್ ಬೋರ್ಡ್‌ವರೆಗೆ ಸುರಂಗ ರಸ್ತೆ
‘ಸುರಂಗ ರಸ್ತೆ ನಿರ್ಮಾಣ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಎಸ್ಟೀಮ್ ಮಾಲ್‌ನಿಂದ ಸಿಲ್ಕ್ ಬೋರ್ಡ್‌ವರೆಗೆ 18.5 ಕಿ.ಮೀ ಉದ್ದದ ಸುರಂಗ ರಸ್ತೆ ನಿರ್ಮಿಸಲು ಸಂಪುಟ ಸಭೆಯಲ್ಲಿ ಚರ್ಚಿಸಿ ಟೆಂಡರ್ ಕರೆಯುತ್ತೇವೆ. ಈ ರಸ್ತೆ ನಿರ್ಮಾಣಕ್ಕಾಗಿ ಕೆಲವೆಡೆ ಜಾಗ ವಶಕ್ಕೆ ಪಡೆಯಬೇಕಾಗುತ್ತದೆ. ಇದನ್ನು ಶಾಸಕರ ಜೊತೆ ಚರ್ಚಿಸಿದ್ದು ಯೋಜನೆಗೆ ಒಪ್ಪಿಗೆ ಸೂಚಿಸಿದ್ದಾರೆ’ ಎಂದು ಶಿವಕುಮಾರ್ ಹೇಳಿದರು.
‘ಮುಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲ ಮೆಟ್ರೊ ಮಾರ್ಗಗಳನ್ನು ಡಬಲ್ ಡೆಕ್ಕರ್ ಮೇಲ್ಸೆತುವೆ ಮಾದರಿಯಲ್ಲಿ ನಿರ್ಮಿಸಲಾಗುವುದು. ಬಿಬಿಎಂಪಿ ಮತ್ತು ಮೆಟ್ರೊ ಇದರ ವೆಚ್ಚ ಭರಿಸಲಿವೆ’ ಎಂದರು.
‘ಕಸ ವಿಲೇವಾರಿಗೆ ನಾಲ್ಕು ಕಡೆ ಜಾಗ’
‘ಕಸ ವಿಲೇವಾರಿಗೆ ನಗರದ 20 ಕಿ.ಮೀ ದೂರ ವ್ಯಾಪ್ತಿಯಲ್ಲಿ ನಾಲ್ಕು ಕಡೆ ಜಾಗ ಗುರುತಿಸಲಾಗುವುದು. ಸರ್ಕಾರಿ ಜಾಗ ಲಭ್ಯವಾದರೆ ಬಳಸಲಾಗುವುದು. ಸಿಗದಿದ್ದರೆ ಖಾಸಗಿ ಜಾಗ ಖರೀದಿಸಲಾಗುವುದು. ಕೇಂದ್ರ ಪರಿಸರ ಇಲಾಖೆ ನಿಯಮಾನುಸಾರ ಇದನ್ನು ಮಾಡಲಾಗುವುದು’ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು. ‘ರಸ್ತೆಯಲ್ಲಿ ನಿಲ್ಲಿಸಿರುವ ಹಳೇ ವಾಹನಗಳನ್ನು ತೆಗೆದು ಯಾರ್ಡ್‌ಗಳಿಗೆ ಹಾಕಿ ಹರಾಜು ಮಾಡಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ವಿಶೇಷ ಅನುದಾನಕ್ಕೆ ಬೇಡಿಕೆ
‘ಶಾಸಕರು ವಿಶೇಷ ಅನುದಾನ ನೀಡುವಂತೆ ಕೇಳಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಮತ್ತು ಸಚಿವರ ಜತೆ ಚರ್ಚಿಸಿ ಎಷ್ಟು ಅನುದಾನ ನೀಡಲು ಸಾಧ್ಯವೊ ಅದನ್ನು ನೀಡುತ್ತೇವೆ’ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು. ‘ನಗರದ ಸಮಸ್ಯೆಗಳಿಗೆ ಪರಿಹಾರ ನೀಡಲು ಬಿಚ್ಚು ಮನಸ್ಸಿನಿಂದ ಎಲ್ಲ ಶಾಸಕರು ಸಲಹೆಗಳನ್ನು ನೀಡಿದ್ದಾರೆ.
‘ಬ್ರ್ಯಾಂಡ್ ಬೆಂಗಳೂರು’ ವಿಚಾರವಾಗಿಯೂ ಚರ್ಚೆ ಮಾಡಿದ್ದೇವೆ. ಇನ್ನು ‘ಗ್ರೇಟರ್ ಬೆಂಗಳೂರು ಆಡಳಿತ’ ಮಸೂದೆ ವಿಚಾರವಾಗಿ ಸದನ ಸಮಿತಿ ರಚನೆಗೆ ನಿರ್ಧರಿಸಿದ್ದೇವೆ. ವಿರೋಧ ಪಕ್ಷದ ನಾಯಕರು ಸಮಿತಿಗೆ ಅವರ ಪಕ್ಷದ ಶಾಸಕರ ಹೆಸರು ನೀಡಿದ ತಕ್ಷಣ ಈ ಸಮಿತಿಯನ್ನು ರಚಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.