ADVERTISEMENT

ಬೆಂಗಳೂರು| ಔಷಧ ಪೂರೈಕೆ: ₹30 ಕೋಟಿ ಬಿಡುಗಡೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 14:44 IST
Last Updated 18 ಫೆಬ್ರುವರಿ 2026, 14:44 IST
   

ಬೆಂಗಳೂರು: ಆಸ್ಪತ್ರೆಗಳಿಗೆ ಅಗತ್ಯ ಔಷಧ ಪೂರೈಸಲು ₹ 30 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. 

ಉಚಿತ ಔಷಧ ಯೋಜನೆ ಹಾಗೂ ಜನನಿ ಶಿಶು ಸುರಕ್ಷಾ ಕಾರ್ಯಕ್ರಮದಡಿ ನೀಡಲಾಗುವ ಅನುದಾನ ಬಳಸಿಕೊಂಡು ಆಸ್ಪತ್ರೆಗಳಲ್ಲಿ ಸ್ಥಳೀಯವಾಗಿ ಔಷಧಗಳನ್ನು ಖರೀದಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಯೋಜನೆಯಾದ ‘ರಾಷ್ಟ್ರೀಯ ಆರೋಗ್ಯ ಅಭಿಯಾನ’ದಡಿ (ಎನ್‌ಎಚ್ಎಂ) ಅನುದಾನ ಬಿಡುಗಡೆಯಾಗದಿರುವುದರಿಂದ, ವಿವಿಧ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳ ಹಿತದೃಷ್ಟಿಯಿಂದ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ಆದೇಶದಲ್ಲಿ ಇಲಾಖೆ ತಿಳಿಸಿದೆ.

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ (ಕೆಎಸ್‌ಎಂಎಸ್‌ಸಿಎಲ್‌) ಖಾತೆಯಲ್ಲಿ ಲಭ್ಯವಿರುವ ₹ 30 ಕೋಟಿ ಹಣವನ್ನು ಎರಡು ತಿಂಗಳ ಅವಧಿಗೆ ಸ್ಥಳೀಯವಾಗಿ ಔಷಧ ಖರೀದಿಗೆ ಬಳಸಲು ಅನುಮತಿ ನೀಡಲಾಗಿದೆ. ಕೆಎಸ್‌ಎಂಎಸ್‌ಸಿಎಲ್‌ ಕೂಡಲೇ ₹ 30 ಕೋಟಿಯನ್ನು ಸುವರ್ಣ ಆರೋಗ್ಯ ಟ್ರಸ್ಟ್‌ನ (ಸಾಸ್ಟ್) ಬ್ಯಾಂಕ್‌ ಖಾತೆಗೆ ವರ್ಗಾಯಿಸಬೇಕು ಎಂದು ಸೂಚಿಸಿದೆ. 

ADVERTISEMENT

ಸಾಸ್ಟ್ ಹಣವನ್ನು ಸ್ವೀಕರಿಸಿದ ನಂತರ ಸರ್ಕಾರಿ ಆಸ್ಪತ್ರೆಗಳ ಬ್ಯಾಂಕ್‌ ಖಾತೆಗೆ ಜಮಾ ಮಾಡಬೇಕು. ಆಸ್ಪತ್ರೆಗಳು ಸ್ಥಳೀಯವಾಗಿ ಅತ್ಯವಶ್ಯಕ ಔಷಧಗಳನ್ನು ಖರೀದಿಸಿ, ರೋಗಿಗಳಿಗೆ ವಿತರಿಸಬೇಕು ಎಂದು ತಿಳಿಸಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.