ADVERTISEMENT

ಯೋಜನೆಗಳಿಂದ ಶಕ್ತಿಶಾಲಿ ದೇಶ: ಗೆಹಲೋತ್

​ಪ್ರಜಾವಾಣಿ ವಾರ್ತೆ
Published 25 ಜುಲೈ 2022, 2:20 IST
Last Updated 25 ಜುಲೈ 2022, 2:20 IST
   

ಬೆಂಗಳೂರು: ‘ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್ ಮುಂತಾದ ಮಹತ್ವದ ಯೋಜನೆಗಳ ಸಹಾಯದಿಂದ ಶಕ್ತಿಶಾಲಿ ದೇಶ ಕಟ್ಟಲು ಸಾಧ್ಯವಿದೆ. ಇದರ ಒಟ್ಟು ಫಲಿತಾಂಶವೇ ಆತ್ಮನಿರ್ಭರ ಭಾರತ’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಹೇಳಿದರು.

ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಯಲಚ ಗುಪ್ಪೆಯಲ್ಲಿ ಬಂಟರ ಸಂಘದ ಬಿಎಸ್‌ಆರ್‌ಎನ್‌ಎಸ್ ವಿದ್ಯಾನಿ ಕೇತನ-2 ಶಾಲಾ ಸಂಕೀರ್ಣ ಉದ್ಘಾಟಿಸಿ ಮಾತನಾಡಿದರು.

‘ಭವಿಷ್ಯದಲ್ಲಿ ಉದ್ಯೋಗ ಸೃಷ್ಟಿ, ಮಹಿಳಾಸಶಕ್ತೀಕರಣ ಹಾಗೂ ಪರಸ್ಪರ ಸಹಭಾಗಿತ್ವದ ಮೂಲಕ ದೇಶದ ಅಭಿವೃದ್ಧಿಗೆ ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಶಿಕ್ಷಣ ನೀಡಬೇಕು’ ಎಂದರು.

ADVERTISEMENT

ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಸುಭುದೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ‘ಶಿಕ್ಷಣ ಸಂಸ್ಥೆಗಳು ದೇಶದ ಪ್ರಗತಿಯ ಮಾಧ್ಯಮವಾಗಿದೆ. ಯಾರು ಅಕ್ಷರದಿಂದ ದೂರ ಆಗಿರುತ್ತಾರೆ, ಅವರು ಲೋಕ ಕಂಟಕರಾಗಿರುತ್ತಾರೆ’ ಎಂದರು.

‘ಶೀಲ, ಚಾರಿತ್ರ್ಯ, ಸೇವೆ, ತ್ಯಾಗದ ಮನೋಭಾವನೆಯ ಶಿಕ್ಷಣ ನೀಡಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ಮಾಜಿ ಲೋಕಾಯುಕ್ತ ನ್ಯಾಯ ಮೂರ್ತಿ ಪಿ. ವಿಶ್ವನಾಥ ಶೆಟ್ಟಿ, ಬಿ.ಎಸ್.ಆರ್.ಎನ್.ಎಸ್ ವಿದ್ಯಾನಿಕೇತನದ ಆಡಳಿತ ಮಂಡಳಿ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ, ಬೆಂಗಳೂರು ವಿವಿ ಕುಲಪತಿ ಡಾ. ಎಂ. ಜಯಕರ ಶೆಟ್ಟಿ, ಉದ್ಯಮಿ ಶಶಿಕಿರಣ್ ಶೆಟ್ಟಿ, ಮಿಸ್ ಇಂಡಿಯಾ ಸಿನಿ ಶೆಟ್ಟಿ ಉಪಸ್ಥಿತರಿದ್ದರು.

ಬಂಟರ ಸಂಘದ ಅಧ್ಯಕ್ಷ ಆರ್. ಉಪೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮಧುಕರ ಶೆಟ್ಟಿ, ಕೋಶಾಧಿಕಾರಿ ದೀಪಕ್ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.