
ಗುರುದತ್ತ ಹೆಗಡೆ
ಬೆಂಗಳೂರು: ‘ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಕರ್ತವ್ಯದ ಅವಧಿಯಲ್ಲಿ ಗೈರಾಗಿ ಸಾಮೂಹಿಕ ಮುಷ್ಕರ ಕೈಗೊಂಡಲ್ಲಿ ಕಾನೂನಿನ ಅಡಿ ಕ್ರಮ ಕೈಗೊಳ್ಳಲಾಗುವುದು’ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಕೇಂದ್ರ ಸಂಘ ಹಾಗೂ ಇಲಾಖೆಯ ಎಲ್ಲ ವೃಂದ ಸಂಘಗಳು ಮಾರ್ಚ್ 11ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ಎಚ್ಚರಿಸಿವೆ.
ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ, ಮುಂಬಡ್ತಿ, ಕರ್ತವ್ಯದ ಬಳಿಕ ಖಾಸಗಿ ವ್ಯವಸ್ಥೆಯಡಿ ಚಿಕಿತ್ಸೆಗೆ ಅವಕಾಶ ಸೇರಿ 14 ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿವೆ.
ಈ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳನ್ನು ವಿವರಿಸಿರುವ ಇಲಾಖೆ ಆಯುಕ್ತ ಗುರುದತ್ತ ಹೆಗಡೆ, ಕಾನೂನಿನಡಿ ಲಭ್ಯವಿರುವ ಮಾರ್ಗಗಳನ್ನು ಅನುಸರಿಸಿ ಬೇಡಿಕೆಗಳನ್ನು ಈಡೇರಿಸಿಕೊಳ್ಳುವಂತೆ ಮುಷ್ಕರಕ್ಕೆ ಮುಂದಾಗಿರುವವರಿಗೆ ಸೂಚಿಸಿದ್ದಾರೆ.
‘ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿ ಸಾರ್ವಜನಿಕ ಆರೋಗ್ಯ ಸೇವೆಯ ನಿರಂತರತೆ ಮತ್ತು ರೋಗಿಗಳ ಆರೋಗ್ಯ ಕಾಪಾಡುವ ಮಹತ್ವದ ಜವಾಬ್ದಾರಿ ಹೊಂದಿದ್ದಾರೆ. ಸಾಮೂಹಿಕ ಮುಷ್ಕರದಂತಹ ಕ್ರಮಗಳಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಲಿದೆ. ಆದ್ದರಿಂದ ಮುಷ್ಕರದಿಂದ ಹಿಂದೆ ಸರಿದು ಕರ್ತವ್ಯ ನಿರ್ವಹಿಸಬೇಕಿದೆ. ಬೇಡಿಕೆಗಳು ಹಾಗೂ ಸಮಸ್ಯೆಗಳ ಕುರಿತು ಕಾನೂನಿನಡಿ ಲಭ್ಯವಿರುವ ಮಾರ್ಗಗಳನ್ನು ಬಳಸಿ, ಬಗೆಹರಿಸಿಕೊಳ್ಳಬೇಕು. ವೈದ್ಯರು ಹಾಗೂ ಸಿಬ್ಬಂದಿ ಮುಷ್ಕರದ ನಿಮಿತ್ತ ಕೆಲಸಕ್ಕೆ ಗೈರಾದಲ್ಲಿ, ಸಾರ್ವಜನಿಕರಿಗೆ ತೊಂದರೆಯಾದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದ್ದಾರೆ.
‘ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸಮಗ್ರವಾಗಿ ತಿದ್ದುಪಡಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ 450 ವೈದ್ಯರಿಗೆ ಕಾಲಮಿತಿ ಮುಂಬಡ್ತಿ ನೀಡಲಾಗಿದೆ. 75 ಮಂದಿಯನ್ನು ಶುಶ್ರೂಷಾಧಿಕಾರಿ ಹುದ್ದೆಗೆ ಪದೋನ್ನತಿ ಮಾಡಲಾಗಿದೆ. ಎಲ್ಲ ವೃಂದದ ಸಿಬ್ಬಂದಿಗೆ ಪದೋನ್ನತಿ ನೀಡಲು ಶೀಘ್ರ ಕ್ರಮವಹಿಸಲಾಗುವುದು. ಇದೇ ಪ್ರಥಮ ಬಾರಿಗೆ ಕಳೆದ ವರ್ಷ 5,700 ವೈದ್ಯರ ಹಾಗೂ ಇತರೆ ಸಿಬ್ಬಂದಿಯನ್ನು ಪಾರದರ್ಶಕವಾಗಿ ವರ್ಗಾವಣೆ ಮಾಡಲಾಗಿದೆ. ಔಷಧಗಳ ಸಮರ್ಪಕ ಪೂರೈಕೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗತ್ಯ ಕ್ರಮವಹಿಸಲಾಗಿದೆ’ ಎಂದು ತಿಳಿಸಿದ್ದಾರೆ.
‘ನೆರೆಯ ಕೆಲವು ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ವೈದ್ಯರಿಗೆ ಉತ್ತಮ ವೇತನ ನೀಡಲಾಗುತ್ತಿದೆ. ವಿಶೇಷ ಭತ್ಯೆ, ಪ್ರೋತ್ಸಾಹ ಧನವನ್ನು ಒದಗಿಸಲಾಗುತ್ತಿದೆ’ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.