ಬೆಂಗಳೂರು: ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಮರಣ ಪ್ರಮಾಣ ಪತ್ರ ಇಲ್ಲದೆಯೇ ಅನುಮತಿ ನೀಡಿದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮಧ್ಯಂತರ ಅರ್ಜಿಗೆ(ಐಎ) ಪ್ರತಿಕ್ರಿಯೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಶವಗಳನ್ನು ಅಂತರ್ ಜಿಲ್ಲೆ ಅಥವಾ ಅಂತರರಾಜ್ಯಕ್ಕೆ ಕೊಂಡೊಯ್ಯಲು ಮಾತ್ರ ಮರಣ ಪ್ರಮಾಣ ಪತ್ರದ ಅಗತ್ಯ ಇದೆ ಎಂದು ಏ.21ರಂದು ಹೊರಡಿಸಿರುವ ಸುತ್ತೋಲೆಯನ್ನು ಉಲ್ಲೇಖಿಸಿ ಭಾರತ ಪುನರುತ್ತಾನ ಟ್ರಸ್ಟ್ ಅರ್ಜಿ ಸಲ್ಲಿಸಿದೆ.
‘ನಗರದ ಹೊರವಲಯದಲ್ಲಿನ ಅನೇಕ ಕಲ್ಲು ಕ್ವಾರಿಗಳನ್ನು ತಾತ್ಕಾಲಿಕ ಸ್ಮಶಾನಗಳನ್ನಾಗಿ ಪರಿವರ್ತಿಸಲಾಗಿದೆ. ಮೃತದೇಹಗಳನ್ನು ತಮ್ಮ ಜಮೀನಿನಲ್ಲೂ ಹೂಳಲು ಅನುಮತಿಸಲಾಗಿದೆ. ಆದರೆ, ಅಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ಪರಿಶೀಲಿಸಲು ಯಾವುದೇ ವಿಧಾನಗಳಿಲ್ಲ. ಅಂತರ್ ಜಿಲ್ಲೆ ಮತ್ತು ಅಂತರ ರಾಜ್ಯಕ್ಕೆ ಶವ ಸಂಸ್ಕಾರ ಮಾಡಲು ಮರಣ ಪ್ರಮಾಣ ಪತ್ರ ಕಡ್ಡಾಯ. ಆದರೆ, ಅವುಗಳ ಪರಿಶೀಲನೆಗೆ ಯಾವುದೇ ಕಾರ್ಯವಿಧಾನ ಇಲ್ಲ’ ಎಂದು ಎಂದು ಅರ್ಜಿಯಲ್ಲಿ ದೂರಲಾಗಿದೆ.
ಅರ್ಜಿ ದಾಖಲಿಸಿಕೊಂಡಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮುರ್ತಿ ಅರವಿಂದಕುಮಾರ್ ಅವರನ್ನು ಒಳಗೊಂಡ ವಿಶೇಷ ಪೀಠ, ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ನಡೆಸುವಂತೆ ತಿಳಿಸಿತು.
‘ಚಿತಾಗಾರಗಳಲ್ಲಿ ಸಿಬ್ಬಂದಿ ಹೆಚ್ಚಿನ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಶವ ಸಂಸ್ಕಾರಕ್ಕೆ ₹50 ಸಾವಿರದಷ್ಟು ದೊಡ್ಡ ಮೊತ್ತಕ್ಕೆ ಒತ್ತಡ ಹೇರಲಾಗುತ್ತಿದೆ ಎಂಬ ವರದಿಗಳೂ ಮಾಧ್ಯಮಗಳಲ್ಲಿ ಪ್ರಕಟವಾಗಿವೆ’ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.