ADVERTISEMENT

ಪಿಎಸ್‌ಐ ಶ್ರೀನಿವಾಸ್ ವಿಕೃತಿ- ಗೃಹ ಇಲಾಖೆ, ಸಿಬಿಐಗೆ ನೋಟಿಸ್‌:ಹೈಕೋರ್ಟ್‌

ಪಿಎಸ್‌ಐ ಶ್ರೀನಿವಾಸ್ ವಿಕೃತಿ ಆರೋಪ: ಪತ್ನಿಯ ದೂರು

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 21:21 IST
Last Updated 1 ಜುಲೈ 2022, 21:21 IST
   

ಬೆಂಗಳೂರು: ‘ವಿಕೃತ ಕಾಮಕೇಳಿಗೆ ಆಹ್ವಾನಿಸಿ ನನ್ನನ್ನು, ನನ್ನ ತಂಗಿಯನ್ನು ಹಾಗೂ ನನ್ನ ಮೊದಲ ಗಂಡನಿಗೆ ಜನಿಸಿದ ವಯಸ್ಕ ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಶೋಷಿಸುತ್ತಿರುವ ಪೊಲೀಸ್ ಇನ್‌ಸ್ಪೆಕ್ಟರ್ ಆಗಿರುವ ನನ್ನ ಪತಿಯ ವಿರುದ್ಧ ಕ್ರಮಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಮುಸ್ಲಿಂ ಮಹಿಳೆಯೊಬ್ಬರು ಸಲ್ಲಿಸಿರುವ ರಿಟ್‌ ಅರ್ಜಿಗೆ ಸಂಬಂಧಿಸಿದಂತೆ ಗೃಹ ಇಲಾಖೆಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ನಗರದ 36 ವರ್ಷದ ಮುಸ್ಲಿಂ ಮಹಿಳೆಯೊಬ್ಬರು ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ, ಪ್ರತಿವಾದಿಗಳಾದ ಪೊಲೀಸ್ ಮಹಾ ನಿದೇಶಕರು, ನಗರ ಪೊಲೀಸ್ ಆಯುಕ್ತರು, ಸಿಬಿಐ, ಜೆ.ಸಿ. ನಗರ ಠಾಣಾ ಇನ್‌ಸ್ಪೆಕ್ಟರ್ ಮತ್ತು ಟಿ.ಆರ್.ಶ್ರೀನಿವಾಸ್‌ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.

ಅರ್ಜಿದಾರ ಮಹಿಳೆಯ ಪರ ವಕೀಲರಾದ ನವೀದ್‌ ಅಹಮದ್‌ ಮತ್ತು ಎಚ್‌.ಸುನಿಲ್‌ ಕುಮಾರ್ ಜಂಟಿ ವಕಾಲತ್ತು ಸಲ್ಲಿಸಿದ್ದಾರೆ. ಆರೋಪಿ ಟಿ.ಆರ್. ಶ್ರೀನಿವಾಸ್ ವಸಂತನಗರದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ.

ADVERTISEMENT

ಪ್ರಕರಣವೇನು?: ‘ಸಂಕಟದ ಗಳಿಗೆಯೊಂದರಲ್ಲಿ ಪೊಲೀಸ್‌ ಠಾಣೆಗೆ ದೂರು ಕೊಡಲು ಹೋದಾಗ ಪರಿಚಯವಾಗಿದ್ದ ಶ್ರೀನಿವಾಸ್‌ ನನ್ನನ್ನು ಮದುವೆಯಾದರು. ಕೆಲ ವರ್ಷಗಳ ನಂತರ ಅಮಾನವೀಯವಾಗಿ ನಡೆದುಕೊಳ್ಳಲು ಆರಂಭಿ ಸಿದರು. ಈಗ ನನ್ನ ತಂಗಿಯ ಜತೆಗೂ ಅನೈತಿಕ ಸಂಬಂಧ ಬೆಳೆಸಿ ಆಕೆ ಗರ್ಭಿಣಿಯಾಗಲು ಕಾರಣರಾಗಿದ್ದಾರೆ. ನಾನು ಮನೆಯಲ್ಲಿ ಇಲ್ಲದ ವೇಳೆ ನನ್ನ ಮೊದಲ ಗಂಡನಿಗೆ ಜನಿಸಿದ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಮಹಿಳೆ ರಿಟ್‌ ಅರ್ಜಿಯಲ್ಲಿ ದೂರಿದ್ದಾರೆ.

‘ಈ ಸಂಬಂಧ 2022ರ ಜೂನ್ 1ರಂದು ಜೆ.ಸಿ. ನಗರ ಠಾಣೆ ಇನ್‌ಸ್ಪೆಕ್ಟರ್‌ಗೆ ದೂರು ನೀಡಿದರೂ ತನಿಖೆ ನಡೆಸಿಲ್ಲ. ಬದಲಾಗಿ ಶ್ರೀನಿವಾಸ್ ಜೊತೆ ಸೇರಿ ನನ್ನನ್ನೇ ಠಾಣೆಗೆ ಕರೆಯಿಸಿ ದೂರು ಹಿಂಪಡೆಯುವಂತೆ ಬೆದರಿಸಿದ್ದಾರೆ. ಹಣದ ಆಮಿಷವೊಡ್ಡಿ ರಾಜಿ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ನನಗೆ ನ್ಯಾಯಬೇಕು, ಆದ್ದರಿಂದ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ನಿರ್ದೇಶಿಸಬೇಕು‘ ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.