ADVERTISEMENT

ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ: ಬಿಬಿಎಂಪಿ ಕಾರ್ಯವೈಖರಿಗೆ ಹೈಕೋರ್ಟ್‌ ಚಾಟಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 16:42 IST
Last Updated 26 ನವೆಂಬರ್ 2021, 16:42 IST
ನ್ಯಾಯಮೂರ್ತಿ ಬಿ.ವೀರಪ್ಪ
ನ್ಯಾಯಮೂರ್ತಿ ಬಿ.ವೀರಪ್ಪ   

ಬೆಂಗಳೂರು: ‘ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ’ ಎಂದು ಬಿಬಿಎಂಪಿ ಕಾರ್ಯವೈಖರಿಗೆ ಚಾಟಿ ಬೀಸಿರುವ ಹೈಕೋರ್ಟ್, ‘ಸರ್ಕಾರ ಮಾಡಬೇಕಾದ ಕೆಲಸವನ್ನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮಾಡುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಸಾರ್ವಜನಿಕ ಶೌಚಾಲಯಗಳ ಸ್ಥಿತಿಗತಿ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ‘ಲೆಟ್ಸ್‌ಕಿಟ್‌’ ಪ್ರತಿಷ್ಠಾನ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಹಾಗೂ ನ್ಯಾಯಮೂರ್ತಿ ಕೆ.ಎಸ್‌.ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲೆ ಬಿ.ವಿ. ವಿದ್ಯುಲ್ಲತಾ, ‘ಶೌಚಾಲಯಗಳ ಸ್ಥಿತಿಗತಿ ಮತ್ತು ನಿರ್ವಹಣೆಯ ಕುರಿತಂತೆ ಪ್ರಾಧಿಕಾರ ಈಗಾಗಲೇ ಸಮೀಕ್ಷೆ ನಡೆಸಿ ಈ ಸಂಬಂಧ ಬಿಬಿಎಂಪಿಗೆ ವರದಿ ಸಲ್ಲಿಸಿದೆ. ಅಂತೆಯೇ, ಇನ್ನೂ ಹೆಚ್ಚಿನ ಕೆಲಸ ಮಾಡಲು ಪ್ರಾಧಿಕಾರದ ಬಳಿ ಸಮರ್ಪಕ ಸಿಬ್ಬಂದಿ ಇಲ್ಲ’ ಎಂದರು.

ADVERTISEMENT

‘ಬಿಬಿಎಂಪಿ ಮಾಡಬೇಕಾದ ಕೆಲಸವನ್ನು ಪ್ರಾಧಿಕಾರ ಮಾಡುತ್ತಿದೆ. ಪ್ರಾಧಿಕಾರವು ಅರೆನ್ಯಾಯಿಕ ಸ್ವಯಂ ಸೇವಾ ಕಾರ್ಯಕರ್ತರನ್ನು ಬಳಸಿಕೊಂಡು ತನ್ನ ಕೆಲಸ ಮುಂದುವರಿಸಲು ನ್ಯಾಯಾಲಯ ಅನುಮತಿ ನೀಡಬೇಕು. ಸ್ವಯಂ ಸೇವಾ ಕಾರ್ಯಕರ್ತರಿಗೆ ಬಿಬಿಎಂಪಿ ವತಿಯಿಂದ ಸಂಭಾವನೆ ಕೊಡಿಸಬೇಕು. ಒಂದೊಮ್ಮೆ ಕೋರ್ಟ್‌ ಬಿಬಿಎಂಪಿಗೆ ದಂಡ ವಿಧಿಸಿದರೆ ಆ ಹಣವನ್ನು ಕಾರ್ಯಕರ್ತರ ಸಂಭಾವನೆಗೆ ಬಳಸಿಕೊಳ್ಳಬಹುದು’ ಎಂದು ಮನವಿ ಮಾಡಿದರು.

ಈ ಹೇಳಿಕೆಗೆ ಕೆರಳಿದ ನ್ಯಾಯಪೀಠ, ‘ಎಲ್ಲ ಕೆಲಸವನ್ನೂ ಪ್ರಾಧಿಕಾರವೇ ಮಾಡಿದೆ. ಸರ್ಕಾರ ಏನೊಂದೂ ಕೆಲಸ ಮಾಡುತ್ತಿಲ್ಲ. ಒಂದೊಮ್ಮೆ ಕೆಲಸ ಮಾಡಿದ್ದರೆ, ಈ ಪ್ರಮಾಣದ ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳು ಕೋರ್ಟ್ ಮುಂದೆ ಬರುತ್ತಿರಲಿಲ್ಲ’ ಎಂದು ಕಿಡಿ ಕಾರಿತು.

ಇದಕ್ಕೆ ಬಿಬಿಎಂಪಿ ಪರ ವಕೀಲ ವಿ.ಶ್ರೀನಿಧಿ ಅವರು, ‘ಪ್ರಾಧಿಕಾರ ತನ್ನ ವರದಿಯಲ್ಲಿ ತಿಳಿಸಿರುವಂತೆ ಎಲ್ಲೆಲ್ಲಿ ಶೌಚಾಲಯಗಳನ್ನು ಮೇಲ್ದರ್ಜೆಗೆ ಏರಿಸಬೇಕಾಗಿದೆಯೋ ಅಲ್ಲೆಲ್ಲಾ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಮತ್ತು ಹೊಸ ಶೌಚಾಲಯಗಳನ್ನು ನಿರ್ಮಿಸಬೇಕಾದ ಸ್ಥಳಗಳಲ್ಲಿ ಅದಕ್ಕೆ ಬೇಕಾದ ಕ್ರಮ ಕೈಗೊಳ್ಳಲು ಮೂರು ವಾರ ಕಾಲಾವಕಾಶ ನೀಡಬೇಕು’ ಎಂದು ಮನವಿ ಮಾಡಿದರು.

ಈ ಮನವಿಯನ್ನು ಮನ್ನಿಸಿದ ನ್ಯಾಯಪೀಠ, ಶೌಚಾಲಯಗಳನ್ನು ಮೇಲ್ದರ್ಜೆಗೇರಿಸುವ ಬಿಬಿಎಂಪಿ ಕಾರ್ಯವನ್ನು ಕಾಲಕಾಲಕ್ಕೆ ಪರಿಶೀಲಿಸುವಂತೆ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.