ADVERTISEMENT

ಹೈಕೋರ್ಟ್‌ ನ್ಯಾಯಮೂರ್ತಿ ಪುತ್ರಿಗೆ ನ್ಯಾಯ

ಸ್ಟೈಪೆಂಡ್‌ಗೆ ತಡೆ: ಸರ್ಕಾರದ ಕಿವಿ ಹಿಂಡಿದ ನ್ಯಾಯಪೀಠ

ಬಿ.ಎಸ್.ಷಣ್ಮುಖಪ್ಪ
Published 25 ಫೆಬ್ರುವರಿ 2019, 19:24 IST
Last Updated 25 ಫೆಬ್ರುವರಿ 2019, 19:24 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಅಂತರಕಾಲೇಜು ವರ್ಗಾವಣೆ ಬಯಸುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸ್ಟೈಪೆಂಡ್‌ ಕೊಡಲು ಸಾಧ್ಯವಿಲ್ಲ ಎಂಬ ಷರತ್ತು ಅವಿವೇಕತನದಿಂದ ಕೂಡಿದೆ’ ಎಂದು ಹೈಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿದೆ.

ಈ ಕುರಿತಂತೆ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್‌ ಅವರ ಪುತ್ರಿ ಸಂಹಿತಾ ಉಲ್ಲೋಡ ಅವರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದ್ದು, ‘ಸ್ಟೈಪೆಂಡ್‌ ಅನ್ನು ತಡೆದಿರುವುದು ಸಂವಿಧಾನದ 23 (1)ನೇ ವಿಧಿಗೆ ತದ್ವಿರುದ್ಧ ನಡೆಯಾಗಿದೆ’ ಎಂದು ತಿಳಿಸಿದೆ.

ಪ್ರಕರಣವೇನು?: ನ್ಯಾಯಮೂರ್ತಿ ಶ್ರೀನಿವಾಸ ಹರೀಶ್‌ ಕುಮಾರ್ ಅವರ ಪುತ್ರಿ ಸಂಹಿತಾ ಉಲ್ಲೋಡ ಅವರು ಬೆಳಗಾವಿ ಜಿಲ್ಲೆಯ ಶಹಾಪುರದ ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಬಿಎಎಂಎಸ್‌ ಪದವಿ ಅಧ್ಯಯನ ಮಾಡುತ್ತಿದ್ದರು.

ADVERTISEMENT

ತಮ್ಮ ಎರಡನೇ ವರ್ಷದ ಪದವಿಯನ್ನು ಅವರು ಬೆಂಗಳೂರಿನ ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ಪೂರೈಸಲು ಬಯಸಿ ಕಾಲೇಜಿಗೆ ಮನವಿ ಮಾಡಿದ್ದರು. ಈ ಮನವಿಗೆ ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ನಿರಾಕ್ಷೇಪಣಾ ಪತ್ರ ನೀಡಿತ್ತು. ಅಂತೆಯೇ, ‘1990ರ ಜೂನ್‌ 9ರ ಸರ್ಕಾರಿ ಆದೇಶದ ಪ್ರಕಾರ, ನಿಮ್ಮನ್ನು ಶಿಷ್ಯವೇತನ (ಸ್ಟೈಪೆಂಡ್‌) ರಹಿತವಾಗಿ ವರ್ಗಾವಣೆ ಮಾಡಲು ಶಿಫಾರಸು ಮಾಡಲಾಗಿದೆ’ ಎಂದು ತಿಳಿಸಿತ್ತು.

ಸಂಹಿತಾ ಸರ್ಕಾರದ ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ‘ವರ್ಗಾವಣೆ ಬಯಸಿದ ವಿದ್ಯಾರ್ಥಿನಿ ಷರತ್ತಿಗೆ ಒಪ್ಪಿಕೊಂಡು ಸ್ಥಳಾಂತರಗೊಂಡಿರುವಾಗ ಇದನ್ನು ಪ್ರಶ್ನಿಸುವುದು ಸಾಧುವಲ್ಲ’ ಎಂಬ ವಾದ ಮಂಡಿಸಿದ್ದರು.

ಅರ್ಜಿದಾರರ ಪರ ವಕೀಲ ವಿಶ್ವನಾಥ ಆರ್‌.ಹೆಗಡೆ ಇದನ್ನು ಬಲವಾಗಿ ವಿರೋಧಿಸಿದ್ರಲ್ಲದೆ, ‘ಸರ್ಕಾ ರದ ನಿರ್ಧಾರ ಸಮರ್ಥನೀಯವಾಗಿಲ್ಲ’ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

ಸರ್ಕಾರದ ಆದೇಶಕ್ಕೆ ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಪೀಠ, ‘ಸಮಾನತೆಯ ಹಕ್ಕನ್ನು ಮೊಟಕುಗೊಳಿಸಿರುವುದು ಇಲ್ಲಿ ಸ್ಪಷ್ಟವಾಗಿದೆ. ಸರ್ಕಾರ ತಡೆ ಹಿಡಿದಿರುವ ಅರ್ಜಿದಾರರ ಸ್ಟೈಪೆಂಡ್‌ ಅನ್ನು ಸಕ್ಷಮ ಪ್ರಾಧಿಕಾರವು ಹಿಂದಿರುಗಿಸಬೇಕು‘ ಎಂದೂ ನಿರ್ದೇಶಿಸಿದೆ.

ಕೈದಿಗಳೇ ಸ್ಟೈಪೆಂಡ್‌ ಪಡೆಯುತ್ತಾರಲ್ಲಾ...?

‘ಜೈಲಿನಲ್ಲಿರುವ ಕೈದಿಗಳೇ ತಮ್ಮ ಕೆಲಸಕ್ಕೆ ತಕ್ಕ ವೇತನ ಪಡೆಯುವಾಗ ಇಂಟರ್ನ್‌ಶಿಪ್‌ ವೈದ್ಯ ವಿದ್ಯಾರ್ಥಿಗಳು ಅದರಿಂದ ವಂಚಿತರಾಗುವುದು ಎಷ್ಟರಮಟ್ಟಿಗೆ ಸರಿ’ ಎಂದು ನ್ಯಾಯಪೀಠ ಕಿಡಿ ಕಾರಿದೆ.

‘ನಾಗರಿಕ ಸಮಾಜದಲ್ಲಿ ಇಂತಹ ಷರತ್ತುಗಳು ಸಂವಿಧಾನದಲ್ಲಿ ಕೊಡಮಾಡಿದ ವ್ಯಕ್ತಿಯೊಬ್ಬನ ಹಕ್ಕುಗಳ ಉಲ್ಲಂಘನೆಯಾಗುತ್ತದೆ’ ಎಂದು ಆದೇಶದಲ್ಲಿ ತಿಳಿಸಿದೆ.

***

ಇಂಟರ್ನ್‌ಶಿಪ್‌ ವಿದ್ಯಾರ್ಥಿಗಳು ತಮ್ಮ ಸಾರ್ವಜನಿಕ ಸೇವೆಗೆ ಪ್ರತಿಫಲವಾಗಿ ಕಿಂಚಿತ್‌ ವೇತನ ಪಡೆಯುತ್ತಾರೆ. ಇದನ್ನು ತಡೆಯುವುದು ಸರ್ವಥಾ ಸಮರ್ಥನೀಯವಲ್ಲ.

- ಕೃಷ್ಣ ಎಸ್‌.ದೀಕ್ಷಿತ್‌, ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.