ADVERTISEMENT

ರಾಜ್ಯಪಾಲರನ್ನು ವಾಪಸ್‌ ಕರೆಸಿಕೊಳ್ಳಿ: ಕರ್ನಾಟಕ ಜಾಗೃತ ವಕೀಲರ ವೇದಿಕೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 16:40 IST
Last Updated 3 ಅಕ್ಟೋಬರ್ 2024, 16:40 IST
<div class="paragraphs"><p>ಥಾವರ್ ಚಂದ್ ಗೆಹಲೋತ್‌</p></div>

ಥಾವರ್ ಚಂದ್ ಗೆಹಲೋತ್‌

   

ಬೆಂಗಳೂರು: ‘ರಾಜ್ಯದ ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರು ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಅವರನ್ನು ರಾಷ್ಟ್ರಪತಿ ವಾಪಸ್‌ ಕರೆಸಿಕೊಳ್ಳಬೇಕು’ ಎಂದು ಕರ್ನಾಟಕ ಜಾಗೃತ ವಕೀಲರ ವೇದಿಕೆ ಒತ್ತಾಯಿಸಿದೆ.

ನಗರದಲ್ಲಿ ಗುರುವಾರ ಆಯೋಜಿಸಲಾಗಿದ್ದ ವಕೀಲರ ರಾಜ್ಯ ಮಟ್ಟದ ಸಮಾವೇಶದಲ್ಲಿ ವೇದಿಕೆಯು ಈ ಬಗ್ಗೆ ನಿರ್ಣಯ ಅಂಗೀಕರಿಸಿದೆ. ‘ದಲಿತ, ದಮನಿತ ಸಮುದಾಯಗಳ ಧ್ವನಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೇಜೋವಧೆ ಮಾಡಲಾಗುತ್ತಿದೆ. ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ಪಿತೂರಿಗಳಿಗೆ ಪೂರಕವಾಗಿ ರಾಜ್ಯಪಾಲರು ವರ್ತಿಸುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ’ ಎಂದು ನಿರ್ಣಯದಲ್ಲಿ ಹೇಳಿದೆ.

ADVERTISEMENT

‘ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯದ ಅನುಷ್ಠಾನಕ್ಕಾಗಿ ಮೀಸಲಾತಿ ಕಲ್ಪಿಸಲು ಕೇಂದ್ರವು ಕಾನೂನು ಜಾರಿಗೆ ತರಬೇಕು. ಇದಕ್ಕೆ ಅಗತ್ಯವಿರುವ ಪ್ರಸ್ತಾವ ಮತ್ತು ಶಿಫಾರಸನ್ನು ರಾಜ್ಯ ಸರ್ಕಾರ ಮಾಡಬೇಕು’ ಎಂದು ಒತ್ತಾಯಿಸಿದೆ.

‘ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ವಕೀಲರ ಜಾಗೃತಿ ಸಭೆ ಆಯೋಜಿಸಲಾಗುವುದು. ಇದೇ 15ರಂದು ರಾಜ್ಯವ್ಯಾಪಿ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಈ ನಿರ್ಣಯಗಳನ್ನು ಒಳಗೊಂಡ ಮನವಿಯನ್ನು ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು’ ಎಂದು ತಿಳಿಸಿದೆ.

ವಕೀಲರಾದ ಬಾಬಾಸಾಹೇಬ್ ಜಿನರಾಲ್ಕರ್, ವೆಂಕಟೇಶ ವೊರಸೆ, ಎಚ್‌.ಎ.ಹಾವಿನ್‌, ಸಾಯಿಬಣ್ಣ, ಕೆ.ಎಚ್‌. ಮಲ್ಲೇಶಪ್ಪ, ಕರ್ನಾಟಕ ಜಾಗೃತ ವೇದಿಕೆಯ ಎನ್. ಅನಂತನಾಯ್ಕ ಸೇರಿ ಹಲವರು ಸಮಾವೇಶದಲ್ಲಿ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.