ADVERTISEMENT

ರಂಗಭೂಮಿಯಿಂದ ಸಮಾಜದಲ್ಲಿ ಬದಲಾವಣೆ: ಹಂ.ಪ. ನಾಗರಾಜಯ್ಯ

ಕರ್ನಾಟಕ ನಾಟಕ ಅಕಾಡೆಮಿಯಿಂದ ವಿಶ್ವ ರಂಗಭೂಮಿ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2025, 16:14 IST
Last Updated 27 ಮಾರ್ಚ್ 2025, 16:14 IST
ಸಮಾರಂಭದಲ್ಲಿ ಜಿ.ಎನ್. ಮೋಹನ್, ಕೆ.ವಿ. ನಾಗರಾಜಮೂರ್ತಿ, ಕೆ.ಎಂ. ಗಾಯತ್ರಿ, ಹಂ.ಪ. ನಾಗರಾಜಯ್ಯ, ವಿಜಯಾ ಮತ್ತು ಮಾವಳ್ಳಿ ಶಂಕರ್ ಅವರು ರಂಗವಾದ್ಯ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು
–ಪ್ರಜಾವಾಣಿ ಚಿತ್ರ
ಸಮಾರಂಭದಲ್ಲಿ ಜಿ.ಎನ್. ಮೋಹನ್, ಕೆ.ವಿ. ನಾಗರಾಜಮೂರ್ತಿ, ಕೆ.ಎಂ. ಗಾಯತ್ರಿ, ಹಂ.ಪ. ನಾಗರಾಜಯ್ಯ, ವಿಜಯಾ ಮತ್ತು ಮಾವಳ್ಳಿ ಶಂಕರ್ ಅವರು ರಂಗವಾದ್ಯ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಂಗಭೂಮಿಯು ಮನೋರಂಜನೆಗೆ ಸೀಮಿತವಾಗಿರದೆ, ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ಮಾಧ್ಯಮವಾಗಿದೆ’ ಎಂದು ಸಾಹಿತಿ ಹಂ.ಪ. ನಾಗರಾಜಯ್ಯ ಬಣ್ಣಿಸಿದರು.

ಕರ್ನಾಟಕ ನಾಟಕ ಅಕಾಡೆಮಿ, ನಾಟಕ ಬೆಂಗಳೂರು ಹಾಗೂ ರಂಗ ಸೌರಭ ಜಂಟಿಯಾಗಿ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ ವಿಶ್ವ ರಂಗಭೂಮಿ ದಿನ ಆಚರಣೆ ಸಮಾರಂಭ ಉದ್ಘಾಟಿಸಿ, ಮಾತನಾಡಿದರು. 

‘ಸಮಾಜವನ್ನು ಕಟ್ಟುವ ಕ್ರಿಯೆಯಲ್ಲಿ ರಂಗಭೂಮಿ ತೊಡಗಿದ್ದು, ಪರಸ್ಪರ ಪ್ರೀತಿಯಿಂದ ಬದುಕುವ ವಾತಾವರಣವನ್ನು ನಿರ್ಮಿಸಲು ಸಹಕಾರಿಯಾಗಿದೆ. ಮನೋರಂಜನೆ ಜತೆಗೆ ವೈವಿಧ್ಯಮಯ ಪ್ರಯೋಗಗಳು ಈ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆಯುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ADVERTISEMENT

ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ‘ರಂಗಭೂಮಿ ಮೂಲಕ ಜನರು ಶಾಂತಿ, ಸಹಬಾಳ್ವೆ, ಸೌಹಾರ್ದತೆಯನ್ನು ಕಂಡುಕೊಳ್ಳಬಹುದಾಗಿದೆ. ಎಲ್ಲರನ್ನೂ ಒಂದುಗೂಡಿಸುವ ವಿಶೇಷವಾದ ಗುಣವನ್ನು ರಂಗಭೂಮಿ ಹೊಂದಿದೆ. ಇತ್ತೀಚೆಗೆ ಕಲಾಗ್ರಾಮದಲ್ಲಿ ನಡೆದ ರಂಗ ಪರಿಷೆಗೆ 25 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದರು. ಇದರಿಂದಾಗಿ ರಂಗಭೂಮಿಗೆ ಭವಿಷ್ಯವಿದೆ ಎನ್ನುವುದು ಸ್ಪಷ್ಟ’ ಎಂದರು. 

ಲೇಖಕಿ ವಿಜಯಾ, ‘ನಾಟಕಗಳು ಸಾಮಾಜಿಕ ಸೌಹಾರ್ದತೆ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಪರಸ್ಪರ ದ್ವೇಷವಿಲ್ಲದ ರಂಗಭೂಮಿಯನ್ನು ಕಟ್ಟಬೇಕು’ ಎಂದು ಹೇಳಿದರು. 

ಇದೇ ಸಂದರ್ಭದಲ್ಲಿ ಬಹುರೂಪಿ ‍ಪ್ರಕಟಿಸಿದ ಬಿ. ಸುರೇಶ್ ಅವರ ‘ಅಡುಗೆಮನೆಯಲ್ಲೊಂದು ಹುಲಿ’, ಕಿರಣ್ ಭಟ್ ಅವರ ‘ಹೌಸ್‌ಫುಲ್’, ನಾ. ದಾಮೋದರ ಶೆಟ್ಟಿ ಅವರ ‘ಚಾರುವಸಂತ’, ಮಹಿಪಾಲರೆಡ್ಡಿ ಮುನ್ನೂರ್ ಅವರ ‘ರಂಗ ಸುನೇರಿ’ ಪುಸ್ತಕಗಳು ಬಿಡುಗಡೆಯಾದವು. ಕೃತಿಗಳ ಬಗ್ಗೆ ಬಹುರೂಪಿ ಸಂಸ್ಥಾಪಕ ಜಿ.ಎನ್. ಮೋಹನ್ ಮಾತನಾಡಿದರು. ಅಕಾಡೆಮಿಯ ತ್ರೈಮಾಸಿಕ ಸಂಚಿಕೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಗಾಯತ್ರಿ ಬಿಡುಗಡೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.