ADVERTISEMENT

ರಾಜ್ಯದ ವಿವಿಧ ಕಾರಾಗೃಹಗಳ ಪರಿಶೀಲನೆ: ಕೈದಿಗಳ ಬಳಿ ಮೊಬೈಲ್,ಚಾಕು, ಡ್ರಗ್ಸ್ ಪತ್ತೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 15:05 IST
Last Updated 17 ಡಿಸೆಂಬರ್ 2025, 15:05 IST
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ 
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ    

ಬೆಂಗಳೂರು: ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಇಲಾಖೆಯ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್‌ಕುಮಾರ್‌ ಅವರ ಸೂಚನೆ ಮೇರೆಗೆ ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಕೈದಿಗಳ ಬಳಿ ಮೊಬೈಲ್‌, ಚಾಕು ಹಾಗೂ ಡ್ರಗ್ಸ್ ಪತ್ತೆ ಆಗಿದೆ.

ಇಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದಂತೆ ಮಂಗಳೂರು, ಮೈಸೂರು, ವಿಜಯಪುರ, ಬೆಳಗಾವಿ ಜಿಲ್ಲಾ ಕಾರಾಗೃಹಗಳಲ್ಲಿ 36 ಗಂಟೆಗಳ ಕಾಲ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ ಎಂಬುದು ಗೊತ್ತಾಗಿದೆ. 

ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರು ಮೊಬೈಲ್ ಫೋನ್‌ಗಳು, ನಾಲ್ಕು ಚಾಕುಗಳು, ಮೈಸೂರಿನಲ್ಲಿ ಒಂಬತ್ತು ಫೋನ್‌ಗಳು ಹಾಗೂ 11 ಸಿಮ್ ಕಾರ್ಡ್‌ಗಳು, ಬೆಳಗಾವಿಯಲ್ಲಿ ನಾಲ್ಕು ಫೋನ್‌ಗಳು ಹಾಗೂ 366 ಗ್ರಾಂ ಗಾಂಜಾ, ವಿಜಯಪುರದಲ್ಲಿ ಒಂದು ಮೊಬೈಲ್‌ ಫೋನ್ ಹಾಗೂ ಮಂಗಳೂರಿನಲ್ಲಿ 4 ಫೋನ್‌ಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಈ ಹಿಂದೆಯೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿವಿಧ ಬ್ಯಾರಕ್‌ಗಳಲ್ಲಿ ಜೈಲಿನ ಸಿಬ್ಬಂದಿ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದಾಗ 19 ಮೊಬೈಲ್‌ ಫೋನ್‌ಗಳು, 16 ಸಿಮ್ ಕಾರ್ಡ್​ಗಳು, 4 ಚಾರ್ಜರ್ ವೈರ್​ಗಳು, ಮೂರು ಇಯರ್ ಪಾಡ್‌ಗಳು ಹಾಗೂ ₹15,800 ನಗದು ಪತ್ತೆಯಾಗಿತ್ತು.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಅಲೋಕ್‌ಕುಮಾರ್ ಅವರು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸಜಾಬಂದಿಗಳು ಹಾಗೂ ವಿಚಾರಣಾಧೀನ ಕೈದಿಗಳಿಗೆ ನೀಡಲಾಗುತ್ತಿರುವ ಊಟ ಹಾಗೂ ತಿಂಡಿ ಪರಿಶೀಲಿಸಿದ್ದರು. ಕಾರಾಗೃಹದಲ್ಲಿರುವ ಆಸ್ಪತ್ರೆಗೂ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ವೀಕ್ಷಿಸಿದ್ದರು. ಬೇಕರಿಯಲ್ಲೂ ತಪಾಸಣೆ ನಡೆಸಿದ್ದರು. ಕೈದಿಗಳಿಂದಲೂ ಕೆಲ ಮಾಹಿತಿ ಪಡೆದುಕೊಂಡಿದ್ದರು. ಅದರ ಬೆನ್ನಲ್ಲೇ ಕಾರ್ಯಾಚರಣೆ ನಡೆಸಲು ಸೂಚನೆ ನೀಡಿದ್ದರು.

ಮೊಬೈಲ್‌ ತರಿಸಿಕೊಂಡು ಬ್ಯಾರಕ್‌ನಲ್ಲಿ ಇಟ್ಟುಕೊಂಡು ಬಳಕೆ ಮಾಡುತ್ತಿದ್ದರೆ, ಅದನ್ನು ಸಿಬ್ಬಂದಿಗೆ ವಾಪಸ್ ನೀಡಬೇಕು ಎಂದು ಕೈದಿಗಳಿಗೆ ಡಿಜಿಪಿ ಸೂಚನೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.