ಬೆಂಗಳೂರು: ‘ಕರ್ನಾಟಕ ಮಾಹಿತಿ ಆಯೋಗದಲ್ಲಿ ಅರ್ಜಿಗಳ ವಿಲೇವಾರಿ ವಿಳಂಬವಾಗುತ್ತಿದ್ದು, ಆಯುಕ್ತರು ಅಧ್ಯಯನ ನಡೆಸಿ ತ್ವರಿತ ವಿಲೇವಾರಿಗೆ ತಜ್ಞರ ಮಾರ್ಗದರ್ಶನ ಪಡೆಯಬೇಕು’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಸಲಹೆ ನೀಡಿದರು.
ಮಾಹಿತಿ ಹಕ್ಕು ಅಧಿನಿಯಮ ಜಾರಿಗೆ ಬಂದು ಎರಡು ದಶಕವಾದ ಹಿನ್ನೆಲೆಯಲ್ಲಿ ಕರ್ನಾಟಕ ಮಾಹಿತಿ ಆಯೋಗವು ಮಂಗಳವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘5 ವರ್ಷ ಅವಧಿಯ ಸುಮಾರು 5 ಸಾವಿರ ಪ್ರಕರಣಗಳು ಇನ್ನೂ ಇತ್ಯರ್ಥವಾಗಿಲ್ಲ. ಮೇಲ್ಮನವಿ ಸಲ್ಲಿಸಿದ ಪ್ರಕರಣಗಳ ವಿಲೇವಾರಿಯಲ್ಲಿ ವಿಳಂಬವಾಗುವುದನ್ನು ಒಪ್ಪಲಾಗದು. ಕೆಲವು ಪ್ರಕರಣಗಳು 12 ವರ್ಷದಿಂದಲೂ ಇವೆ ಎನ್ನುವುದನ್ನು ಮುಖ್ಯ ಮಾಹಿತಿ ಆಯುಕ್ತರು ತಿಳಿಸಿದ್ದಾರೆ. ಕಾಲಮಿತಿಯೊಳಗೆ ಇತ್ಯರ್ಥಪಡಿಸಬೇಕು ಎಂದು ಇದ್ದರೂ ಏಕೆ ವಿಳಂಬ ಮಾಡಲಾಗುತ್ತಿದೆ’ ಎಂದು ಪ್ರಶ್ನಿಸಿದರು.
ಡಿಜಿಟಲೀಕರಣ: ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎನ್.ಎ.ಹ್ಯಾರಿಸ್ ಮಾತನಾಡಿ, ‘ಸರ್ಕಾರಿ ಕಚೇರಿಗಳು ಡಿಜಿಟಲೀಕರಣಗೊಳ್ಳುವುದರಿಂದ ಮಾಹಿತಿ ಪಡೆಯುವುದು ತಪ್ಪಲಿದೆ. ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಆಡಳಿತ ಶೇ 95ರಷ್ಟು ಡಿಜಿಟಲೀಕರಣಗೊಂಡಿದೆ. ನವೆಂಬರ್ 1ರಿಂದ ಸಂಪೂರ್ಣ ಕಾಗದ ರಹಿತ ಆಡಳಿತ ಆಗಲಿದೆ’ ಎಂದು ತಿಳಿಸಿದರು.
ಮಾಹಿತಿ ಆಯೋಗದ ಪ್ರಥಮ ಮುಖ್ಯ ಆಯುಕ್ತರಾಗಿದ್ದ ಕೆ.ಕೆ.ಮಿಶ್ರಾ, ಮಾಜಿ ಆಯುಕ್ತ ಶೇಖರ್ ಡಿ.ಸಜ್ಜನ್ ಮಾತನಾಡಿದರು. ಆಯುಕ್ತರಾದ ರಾಮನ್, ರುದ್ರಣ್ಣ ಹರ್ತಿಕೋಟೆ, ಬದ್ರುದ್ದೀನ್, ಎಸ್.ರಾಜಶೇಖರ್, ಹರೀಶ್‌ಕುಮಾರ್, ನಾರಾಯಣ ಚನ್ನಾಳ್, ಕಾರ್ಯದರ್ಶಿ ಸುಷ್ಮಾ ಗೋಡಬೋಲೆ ಹಾಜರಿದ್ದರು.
ಮೂರು ಇಲಾಖೆ ಹಿಂದೆ
‘ಕರ್ನಾಟಕ ಮಾಹಿತಿ ಆಯೋಗಕ್ಕೆ ವರ್ಷಕ್ಕೆ 5 ರಿಂದ 6 ಲಕ್ಷ ಅರ್ಜಿಗಳು ಬರುತ್ತಿವೆ. 2025ನೇ ಸಾಲಿನಲ್ಲಿ 55 ಸಾವಿರ ಅರ್ಜಿಗಳು ವಿಲೇವಾರಿ ಆಗಿರಲಿಲ್ಲ. ಜಿಲ್ಲಾ ಮಟ್ಟದಲ್ಲಿ ಕಾರ್ಯಾಗಾರ ಅಭಿಯಾನ ನಡೆಸಿ 9 ತಿಂಗಳಲ್ಲಿ 14 ಸಾವಿರ ಅರ್ಜಿಗಳ ವಿಲೇವಾರಿ ಮಾಡಿದ್ದೇವೆ. ಮೇಲ್ಮನವಿ ಸಲ್ಲಿಸಿದ ಅರ್ಜಿಗಳ ವಿಲೇವಾರಿಗೂ ವಿಶೇಷ ಗಮನ ನೀಡಲಾಗಿದೆ ಎಂದು ಮುಖ್ಯ ಆಯುಕ್ತ ಎ.ಎಂ.ಪ್ರಸಾದ್ ತಿಳಿಸಿದರು. ‘ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ನಗರಾಭಿವೃದ್ದಿ ಕಂದಾಯ ಇಲಾಖೆಗಳು ಅರ್ಜಿಗಳಿಗೆ ಸಂಬಂಧಿಸಿ ಈಗಲೂ ನಿಗದಿತ ಅವಧಿಯೊಳಗೆ ಮಾಹಿತಿ ನೀಡುತ್ತಿಲ್ಲ. ಬೆಂಗಳೂರು ನಗರ ಗ್ರಾಮಾಂತರ ಬೆಳಗಾವಿ ಬಾಗಲಕೋಟೆ ಜಿಲ್ಲೆಯಲ್ಲಿ ಅರ್ಜಿಗಳು ತ್ವರಿತವಾಗಿ ವಿಲೇವಾರಿ ಆಗುತ್ತಿವೆ’ ಎಂದರು.
ರಾಜ್ಯಪಾಲ ಸಿಡಿಮಿಡಿ
‘ಮಾಹಿತಿ ಆಯೋಗದ ಕಾರ್ಯಕ್ರಮ ಶಿಷ್ಟಾಚಾರ ಪ್ರಕಾರ ನಡೆಯುತ್ತಿಲ್ಲ’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಸಿಡಿಮಿಡಿಗೊಂಡ ಪ್ರಸಂಗ ನಡೆಯಿತು. ಕಾರ್ಯಕ್ರಮದಲ್ಲಿ ಭಾಗಿಯಾದವರು ತಮ್ಮ ಭಾಷಣಕ್ಕೆ ನಿಗದಿತ ಅವಧಿಗಿಂತ ಹೆಚ್ಚು ಸಮಯ ತೆಗೆದುಕೊಂಡರು. ಕಾರ್ಯಕ್ರಮ ವಿಳಂಬವಾದಾಗ ರಾಜ್ಯಪಾಲರು ಆಯೋಗದ ಕಾರ್ಯದರ್ಶಿ ಸುಷ್ಮಾ ಗೋಡಬೋಲೆ ಅವರನ್ನು ಕರೆಯಿಸಿ ‘ಬೇಗನೇ ಭಾಷಣಗಳನ್ನು ಮುಗಿಸಿ’ ಎಂದು ಸೂಚನೆ ನೀಡಿದರು. ಬಳಿಕ ಮುಂದೆ ಮಾತನಾಡಬೇಕಾಗಿದ್ದವರ ಮಾತು ಕಡಿತಗೊಳಿಸಿ ರಾಜ್ಯಪಾಲರ ಭಾಷಣಕ್ಕೆ ಅವಕಾಶ ಮಾಡಿಕೊಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.