ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು ವಿವಿಧ ಕಾರಾಗೃಹ ವಾಸಿಗಳಿಗೆ ಹಮ್ಮಿಕೊಂಡಿದ್ದ ಸಾಹಿತ್ಯ ಕಮ್ಮಟಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿರುವುದರಿಂದ, ಇಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳಿಗೂ ಈ ಕಮ್ಮಟದ ಮೂಲಕ ಸಾಹಿತ್ಯಾಭಿರುಚಿ ಮೂಡಿಸಲು ಅಕಾಡೆಮಿ ಮುಂದಾಗಿದೆ.
ಅಕಾಡೆಮಿ ಹಮ್ಮಿಕೊಂಡಿದ್ದ ‘ಕಾರಾಗೃಹ ವಾಸಿಗಳಿಗೆ ಕಮ್ಮಟ’ ಯೋಜನೆಗೆ ಮೇ ತಿಂಗಳಲ್ಲಿ ಚಾಲನೆ ದೊರೆತಿತ್ತು. ಈಗಾಗಲೇ ಮೈಸೂರಿನ ಕೇಂದ್ರ ಕಾರಾಗೃಹ, ಬೆಳಗಾವಿಯ ಹಿಂಡಲಗಾ ಜೈಲು, ಹಾವೇರಿ ಜಿಲ್ಲಾ ಕಾರಾಗೃಹದಲ್ಲಿ ಈ ಕಮ್ಮಟವನ್ನು ನಡೆಸಲಾಗಿದೆ. ಕೈದಿಗಳು ಹಾಗೂ ಜೈಲು ಅಧಿಕಾರಿಗಳು ಉತ್ತಮವಾಗಿ ಸ್ಪಂದಿಸಿದ್ದರಿಂದ ವಿವಿಧ ಕಾರಾಗೃಹಗಳಲ್ಲಿ ಈ ಕಮ್ಮಟವನ್ನು ಹಮ್ಮಿಕೊಳ್ಳಲು ಅಕಾಡೆಮಿ ನಿರ್ಧರಿಸಿದೆ. ಈ ಸಂಬಂಧ ವಿವಿಧ ಕಾರಾಗೃಹಗಳ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸುತ್ತಿದ್ದು, ಇಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿಯೂ ಕಮ್ಮಟ ಆಯೋಜಿಸಲು ಯೋಜನೆ ರೂಪಿಸಿದೆ.
ರಾಜ್ಯದ ಅತಿದೊಡ್ಡ ಮತ್ತು ಪ್ರಮುಖ ಕಾರಾಗೃಹವಾಗಿರುವ ಪರಪ್ಪನ ಅಗ್ರಹಾರಕ್ಕೆ, ರಾಜ್ಯದ ವಿವಿಧ ಭಾಗಗಳಿಂದ ಬಂದ ಅಪರಾಧಿಗಳನ್ನು ಇರಿಸಲಾಗುತ್ತದೆ. ಆದ್ದರಿಂದ ಸುರಕ್ಷತೆ ಹಾಗೂ ಸಿದ್ಧತೆಯನ್ನು ಖಚಿತಪಡಿಸಿಕೊಂಡು ಕಮ್ಮಟ ಹಮ್ಮಿಕೊಳ್ಳಲು ಅಕಾಡೆಮಿ ನಿರ್ಧರಿಸಿದೆ.
ಮೂರು ದಿನಗಳು ಈ ಕಮ್ಮಟ ನಡೆಯಲಿದ್ದು, ಕೈದಿಗಳ ಮನಃಪರಿವರ್ತನೆಗೆ ಸಾಹಿತ್ಯ ಉಪನ್ಯಾಸಗಳನ್ನು ಹಮ್ಮಿಕೊಳ್ಳುವ ಜತೆಗೆ, ಕಾರಾಗೃಹ ವಾಸಿಗಳಿಗೆ ಕಥೆ, ಕವನ ಬರೆಯಲು ಅವಕಾಶ ನೀಡಲಾಗುತ್ತದೆ.
ಕೈದಿಗಳಿಗೆ ಚಟುವಟಿಕೆ: ಈ ಕಮ್ಮಟದಲ್ಲಿ ಕೈದಿಗಳನ್ನು ವಿವಿಧ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾಗುತ್ತದೆ. ಸಾಹಿತ್ಯ ಕ್ಷೇತ್ರದ ಪ್ರಮುಖರು ಉಪನ್ಯಾಸ ನೀಡುತ್ತಾರೆ. ಸಾಹಿತ್ಯ ಹಾಗೂ ಪುಸ್ತಕಗಳ ಓದಿನ ಮಹತ್ವದ ಬಗ್ಗೆಯೂ ಮನವರಿಕೆ ಮಾಡಿಸಲಾಗುತ್ತದೆ. ಕಾರಾಗೃಹ ವಾಸಿಗಳು ಕವನ, ಕಥೆಗಳನ್ನು ವಾಚಿಸಲು ಅವಕಾಶ ನೀಡಲಾಗುತ್ತದೆ. ಈ ಕಮ್ಮಟದ ಉದ್ಘಾಟನೆ ಸಮಾರಂಭದಲ್ಲಿ ಸಾಹಿತಿಗಳ ಜತೆಗೆ ಕಾರಾಗೃಹ ಅಧಿಕಾರಿಗಳೂ ಪಾಲ್ಗೊಳ್ಳುತ್ತಾರೆ. ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕೈದಿಗಳು ಅಧಿಕ ಸಂಖ್ಯೆಯಲ್ಲಿ ಇರುವುದರಿಂದ, ಆಯ್ದ ಕೈದಿಗಳಿಗೆ ಕಮ್ಮಟದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ.
‘ಕಾರಾಗೃಹಗಳಲ್ಲಿ ಅಪರಾಧಿಗಳ ಜತೆಗೆ ಆರೋಪಿಗಳು ಇರುತ್ತಾರೆ. ಅವರು ಬಂಧಿತರಾಗಲು ಹಲವು ಕಾರಣಗಳಿರುತ್ತವೆ. ಬಸವಾದಿ ಶರಣರು ಅದ್ಭುತವಾದ ಮನುಷ್ಯ ನೀತಿಯನ್ನು ಸಾರಿದ್ದಾರೆ. ಕನ್ನಡ ಸಾಹಿತ್ಯವು ಅನೇಕ ಮೌಲ್ಯಗಳನ್ನು ಸಾರುತ್ತಾ ಬಂದಿದೆ. ಕಾರಾಗೃಹದ ಬಂಧಿಗಳಾಗಿರುವವರಿಗೆ ಅಂತಹ ಮೌಲ್ಯಗಳನ್ನು ತಿಳಿಸಿ ಹೇಳಬೇಕಿದೆ. ಆದ್ದರಿಂದ ಈ ಕಮ್ಮಟವನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದು ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ತಿಳಿಸಿದರು.
ಕೈದಿಗಳಿಗೆ ಸಾಹಿತ್ಯ ಪರಿಚಯಿಸಿದರೆ ಅವರಲ್ಲಿ ಅಲ್ಪಸ್ವಲ್ಪವಾದರೂ ಬದಲಾವಣೆ ಸಾಧ್ಯ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿಯೂ ಸಾಹಿತ್ಯ ಕಮ್ಮಟ ಹಮ್ಮಿಕೊಳ್ಳಲಾಗುತ್ತದೆಎಲ್.ಎನ್. ಮುಕುಂದರಾಜ್ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.