ADVERTISEMENT

ಕವಿತೆ ಹಾಡಲು ಅವಕಾಶ ನಿರಾಕರಣೆ: ಕರ್ನಾಟಕ ಸುಗಮ ಸಂಗೀತ ಪರಿಷತ್ತು ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 15:45 IST
Last Updated 29 ಡಿಸೆಂಬರ್ 2022, 15:45 IST
ಕನ್ನಡ ಸಾಹಿತ್ಯ ಪರಿಷತ್ತು
ಕನ್ನಡ ಸಾಹಿತ್ಯ ಪರಿಷತ್ತು    

ಬೆಂಗಳೂರು: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ‘ಕವಿತೆಗಳನ್ನು ವಾಚಿಸಬೇಕೇ ಹೊರತು ಹಾಡುವಂತಿಲ್ಲ’ ಎಂಬ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ನಿಬಂಧನೆಗೆ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಆಕ್ಷೇಪ ವ್ಯಕ್ತಪಡಿಸಿದೆ.

ಹಾವೇರಿಯಲ್ಲಿ 2023ರ ಜ.6ರಿಂದ ಜ.8ರವರೆಗೆ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

‘ಕವಿತೆಯನ್ನು ಹಾಡುವಂತಿಲ್ಲ ಎಂಬ ಪರಿಷತ್ತಿನ ನಿಲುವು ಖಂಡನಾರ್ಹ. ಸುಗಮ ಸಂಗೀತ ಕ್ಷೇತ್ರದ ಪ್ರಮುಖರ ಹೋರಾಟದ ಫಲವಾಗಿ, 1993ರಿಂದ ಸಮ್ಮೇಳನದ ಗೋಷ್ಠಿಗಳಲ್ಲಿ ಸುಗಮ ಸಂಗೀತಕ್ಕೆ ಆದ್ಯತೆ ನೀಡಲಾಗಿದೆ. ಗೊ.ರು. ಚನ್ನಬಸಪ್ಪ ಹಾಗೂ ನಂತರದ ಪರಿಷತ್ತಿನ ಅಧ್ಯಕ್ಷರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಭಾವಗೀತೆಗಳ ಮಹತ್ವ ಸಾರಲು ಅವಕಾಶ ನೀಡಿದ್ದರು. ಸುಗಮ ಸಂಗೀತ ಕಲಾವಿದರು ಗಾಯನದ ಮೂಲಕ ನಾಡಿನ ಹೆಸರಾಂತ ಕವಿಗಳ ಗೀತೆಗಳನ್ನು ಜಗತ್ತಿನಾದ್ಯಂತ ತಲುಪಿಸುತ್ತಿದ್ದಾರೆ’ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ತಿಳಿಸಿದ್ದಾರೆ.

ADVERTISEMENT

‘ಈ ಬಾರಿಯ ಸಮ್ಮೇಳನಾಧ್ಯಕ್ಷರಾಗಿರುವ ದೊಡ್ಡರಂಗೇಗೌಡ ಅವರು ರಚಿಸಿದ ಚಿತ್ರ ಹಾಗೂ ಭಾವಗೀತೆಗಳ ಗಾಯನ ಗೋಷ್ಠಿಗೆ ಅವಕಾಶ ಕಲ್ಪಿಸುವಂತೆ ಕಸಾಪ ಅಧ್ಯಕ್ಷರಿಗೆ ಪ್ರಸ್ತಾಪಿಸಲಾಗಿತ್ತು. ಆಗ ಒಪ್ಪಿಕೊಂಡಿದ್ದ ಅವರು, ಈಗ ಪ್ರಸ್ತಾವನೆ ಕೈಬಿಟ್ಟಿರುವುದಲ್ಲದೇ, ಹಾಡುವ ಅವಕಾಶವನ್ನು ನಿರಾಕರಿಸಿದ್ದಾರೆ. ಕನ್ನಡ ಜನರಿಂದ ಆಯ್ಕೆಯಾದವರು ಈ ರೀತಿ ಸರ್ವಾಧಿಕಾರಿ ಧೋರಣೆ ತಳೆಯುವುದು ಸಮಂಜಸವೇ? ಇವರೇನು ಗೀತ ಗಾಯನ ಪ್ರವೀಣರೇ’ ಎಂದು ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.